ಕೊಲಂಬೋ: ಇದೇ ಆಗಸ್ಟ್ ತಿಂಗಳಿನಿಂದ ಭಾರತದ ವಾರಣಾಸಿಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೋಗೆ ನೇರ ವಿಮಾನ ಹಾರಾಟ ಆರಂಭಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಶ್ರೀಲಂಕಾದ ಕೊಲಂಬೋದಲ್ಲಿ ನಡೆಯುತ್ತಿರುವ ಬೌದ್ಧ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಾರಣಾಸಿಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೋಗೆ ನೇರ ವಿಮಾನ ಹಾರಾಟ ಆರಂಭಿಸಲಾಗುತ್ತದೆ. ಆ ಮೂಲಕ ಶ್ರೀಲಂಕಾದಲ್ಲಿರುವ ನಮ್ಮ ತಮಿಳು ಸಹೋದರ ಹಾಗೂ ಸಹೋದರಿಯರು ನೇರವಾಗಿ ವಾರಣಾಸಿಗೆ ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಮಾಡುವಂತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಬುದ್ಧ ಹುಟ್ಟಿದ ದೇಶ ಭಾರತ. ಹೀಗಾಗಿ ಬುದ್ಧ ಹುಟ್ಟಿದ ನಾಡಿನಿಂದ ಬುದ್ಧ ನೆಲೆಸಿದ್ದ ನಾಡಿಗೆ ವಿಮಾನ ಹಾರಾಟ ನಡೆಸಲಾಗುತ್ತದೆ. ಶಾಂತಿ ಸ್ಥಾಪನೆಗಾಗಿ ಬೌದ್ಧ ಧರ್ಮ ನೀಡಿರುವ ಸಂದೇಶಗಳನ್ನು ನಾನು ನಂಬುತ್ತೇನೆ. ವಿಶ್ವಾದ್ಯಂತ ವ್ಯಾಪಕವಾಗಿರುವ ಹಿಂಸಾಚಾರಕ್ಕೆ ಬೌದ್ಧ ಧರ್ಮದ ಸಂದೇಶಗಳು ಉಪಶಮನಕಾರಿಯಾಗಬಹುದು. ದುರಂತವೆಂದರೆ ಶಾಂತಿ ಸ್ಥಾಪನೆಗೆ ಅಡ್ಡಿಯಾಗಿರುವ ಭಯೋತ್ಪಾದನೆ ಕುರಿತು ನಾವು ಸಾವು-ನೋವು ಸಂಭವಿಸಿದಾಗ ಮಾತ್ರ ಮಾತನಾಡುತ್ತೇವೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ವಿಶ್ವ ಸಮುದಾಯ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಮೋದಿ ಹೇಳಿದರು.
ಅಂತೆಯೇ ತಮ್ಮನ್ನು ಬೌದ್ಧ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕಾಗಿ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಹಾಗೂ ಪ್ರಧಾನಿ ವಿಕ್ರಮೆಸಿಂಘೆ ಹಾಗೂ ಶ್ರೀಲಂಕಾ ಪ್ರಜೆಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.