ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾದವ್ ಪ್ರಕರಣದ ವಿಚಾರಣೆ
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಭಾರತದ ಕುಲಭೂಷಣ್ ಜಾದವ್ ಅವರ ಗಲ್ಲು ಶಿಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದಿನಿಂದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ.
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಭಾರತದ ಕುಲಭೂಷಣ್ ಜಾದವ್ ಅವರ ಗಲ್ಲು ಶಿಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದಿನಿಂದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ.
ಭಾರತ ನಾಗರಿಕ ಕುಲಭೂಷಣ್ ಯಾದವ್ ಗೆ ಗಲ್ಲು ಶಿಕ್ಷೆ ವಿಧಿಸಿದ ಮತ್ತು ನಂತರದಲ್ಲಿ ಆತನಿಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಲು ನಿರಾಕರಿಸಿದ ಪಾಕಿಸ್ತಾನದ ಕ್ರಮದ ವಿರುದ್ಧ ಭಾರತ ಸಲ್ಲಿಸಿರುವ ಅರ್ಜಿಯ ಕುರಿತು ಇಂದಿನಿಂದ ನೆದರ್ಲೆಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ. ಮೇ 8ರಂದು ಭಾರತವು ನ್ಯಾಯಾಲಯದ ಮೊರೆ ಹೋಗಿತ್ತು. ಮರುದಿನವೇ ಜಾಧವ್ ಗಲ್ಲುಶಿಕ್ಷೆಗೆ ಕೋರ್ಟು ತಡೆ ವಿಧಿಸಿ, ಮೇ 15ರಂದು ವಿಚಾರಣೆ ನಿಗದಿಪಡಿಸಿತ್ತು.
ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಕ್ ವಾದ
ಇನ್ನು ಇಂದಿನ ವಾದದಲ್ಲಿ ಪ್ರಮುಖವಾಗಿ ಪಾಕಿಸ್ತಾನ ಪರ ವಕೀಲರು ಕೋರ್ಟ್ನಲ್ಲಿ, ಜಾಧವ್ ಪ್ರಕರಣ ಐಸಿಜೆ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಲು ಮುಂದಾಗಿದ್ದಾರೆ. ಜೊತೆಗೆ ಹಿಂದಿನ ಕೆಲವು ಪ್ರಕರಣಗಳಲ್ಲಿ ಕಾಮನ್ ವೆಲ್ತ್ ರಾಷ್ಟ್ರಗಳ ನಡುವಿನ ವಿವಾದ ಐಸಿಜೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಭಾರತ ಪ್ರತಿಪಾದಿಸಿತ್ತು. ಆ ಸಂದರ್ಭ ಐಸಿಜೆ ಅದನ್ನು ಒಪ್ಪಿಕೊಂಡು ತೀರ್ಪು ನೀಡಿತ್ತು. ಹೀಗಾಗಿ ಕುಲಭೂಷಣ್ ಜಾಧವ್ ಪ್ರಕರಣದಲ್ಲೂ ಪಾಕಿಸ್ತಾನ ಈ ಹಿಂದಿನ ಪ್ರಕರಣ ವಾದವನ್ನು ಪ್ರಸ್ತಾಪಿಸಿ ತನ್ನ ವಾದವನ್ನು ಮಂಡಿಸಲಿದೆ ಎಂದು ಅಂತಾರಾಷ್ಟ್ರೀಯ ಕಾನೂನು ತಜ್ಞರೊಬ್ಬರು ತಿಳಿಸಿದ್ದಾರೆ ಎಂದು ಪಾಕ್ ಪತ್ರಿಕೆಯೊಂದು ವರದಿ ಮಾಡಿದೆ.
ಇದೇ ವೇಳೆ ಪ್ರಕರಣವನ್ನು ಮಾನವ ಹಕ್ಕುಗಳ ಉಲ್ಲಂಘನೆಯ ದೃಷ್ಟಿಕೋನದಲ್ಲಿ ತೆಗೆದುಕೊಂಡರೆ, ಐಸಿಜೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದೂ ಹೇಳಲಾಗಿದೆ. ಭಾರತ ಕೂಡ ಇದೇ ಆಧಾರದಲ್ಲಿ ಐಸಿಜೆ ಮೆಟ್ಟಿಲೇರಿದೆ ಎಂದೂ ಹೇಳಲಾಗುತ್ತಿದೆ.
18 ವರ್ಷಗಳ ಬಳಿಕ ಭಾರತ-ಪಾಕ್ ಮುಖಾಮುಖಿ
ಸುಮಾರು 18 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ-ಪಾಕ್ ಮುಖಾಮುಖಿಯಾಗುತ್ತಿದ್ದು, ಈ ಹಿಂದೆ 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾಗಿದ್ದವು. ಅಂದು ಕಛ್ ಪ್ರದೇಶದಲ್ಲಿ ಭಾರತವು ಪಾಕ್ ನೌಕಾಪಡೆಗೆ ಸೇರಿದ ವಿಮಾನ ಹೊಡೆದುರುಳಿಸಿತ್ತು. ಇದರಲ್ಲಿ ಪಾಕಿಸ್ತಾನದ 16 ನೌಕಾ ಸಿಬ್ಬಂದಿ ಸಾವನ್ನಪ್ಪಿದ್ದರು. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಪಾಕಿಸ್ತಾನ, ‘ನಮ್ಮ ವಾಯುವಲಯದಲ್ಲಿ ವಿಮಾನ ಸಂಚರಿಸುತ್ತಿತ್ತು. ಆದರೂ ಭಾರತ ಅಕ್ರಮವಾಗಿ ವಿಮಾನ ಹೊಡೆದುರುಳಿಸಿದೆ' ಎಂದು ದೂರಿತ್ತು. 2000 ಯ ಜೂನ್ 21ರಂದು ಪ್ರಕರಣದ ತೀರ್ಪನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಪ್ರಕಟಿಸಿತ್ತು. 14-2ರ ಬಹುಮತದ ತೀರ್ಪಿನಲ್ಲಿ ಪಾಕಿಸ್ತಾನದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಪ್ರಕರಣವು ತನ್ನ ವ್ಯಾಪ್ತಿಗೆ ಬಾರದೆಂದು ತೀರ್ಪಿನ ವೇಳೆ ನ್ಯಾಯಾಲಯ ಹೇಳಿತ್ತು.