ಬೆಂಗಳೂರು: ಅಕ್ರಮ ಗಣಿಕಾರಿಕೆ ಪ್ರಕರಣ ಸಂಬಂಧ ಜಂತಕಲ್ ಮೈನಿಂಗ್ ಕಂಪನಿಯಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರು ಮಂಗಳವಾರ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇದೇ ಪ್ರಕರಣ ಸಂಬಂದ ಜಂತರಲ್ ಮೈನಿಂಗ್ ಸಂಸ್ಥೆಯಿಂದ 10 ಲಕ್ಷ ರು. ಲಂಚ ಪಡೆದ ಆರೋಪದ ಮೇರೆಗೆ ಹಿರಿಯ ಐಎಎಸ್ ಅಧಿಕಾರಿ ಗಂಗಾರಾಂ ಬಡೇರಿಯಾರ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಂತೆ, ಈ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಜಂತಕಲ್ ಮೈನಿಂಗ್ ಕಂಪನಿಯಿಂದ ಅದಿರು ಸಾಗಣೆಗೆ ಅನುಮತಿ ನೀಡುವಂತೆ ಅಂದಿನ ಸಿಎಂ ಕುಮಾರಸ್ವಾಮಿ ಒತ್ತಡ ಹೇರಿದ್ದರು ಎಂದು ಗಂಗಾರಾಂ ಬಡೇರಿಯಾ ಈ ಹಿಂದೆ ಆರೋಪ ಮಾಡಿದ್ದರು. ಅದೇ ಕಾರಣಕ್ಕೆ ವಿಚಾರಣೆಗೆ ಹಾಜರಾಗಲು ಎಚ್‌ಡಿಕೆ ಅವರಿಗೂ ಶೀಘ್ರದಲ್ಲೇ ಎಸ್‌ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು 53ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿ ವಿಚಾರಣೆಗೆ ಬರಲಿದೆ ಎಂದು ತಿಳಿದು ಬಂದಿದೆ.
ಬಡೇರಿಯಾ ಬಂಧನದಿಂದ ನನಗೆ ಸಂಕಷ್ಟವಿಲ್ಲ
ಇದೇ ವೇಳೆ ಎಸ್‌ಐಟಿ ಅಧಿಕಾರಿಗಳು ಹಿರಿಯ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿರುವುದರಿಂದ ಕುಮಾರಸ್ವಾಮಿ ಅವರಿಗೆ ಸಂಕಷ್ಟವಿದೆ ಎಂಬ ಸುದ್ದಿಗಳ ಹಿನ್ನಲೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಸುದ್ದಿಯನ್ನು ತಳ್ಳಿಹಾಕಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಅಧಿಕಾರಾವಧಿಯಲ್ಲಿ ಕಾನೂನುಬಾಹಿರ ಕಾರ್ಯಕ್ಕೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಹೀಗಾಗಿ ನನಗಾವುದೇ ಸಂಕಟ ಇಲ್ಲ, ಸಂಕಷ್ಟವೂ ಇಲ್ಲ. ನನ್ನನ್ನು ಹೆದರಿಸಲು ರಾಜ್ಯ ಸರ್ಕಾರ ಕುತಂತ್ರ ನಡೆಸುತ್ತಿದೆ. ನಾವು ತಪ್ಪೆಸಗಿಲ್ಲ ಎಂದ ಮೇಲೆ ಹೆದರುವ ಮಾತೇ ಇಲ್ಲ. ಹಾಲಿ ಸರ್ಕಾರದ ಎಲ್ಲ ಕಾರ್ಯ ಚಟುವಟಿಕೆಗಳ ಬಗ್ಗೆ ನನಗೆ ಮಾಹಿತಿಯಿದೆ. ಸೂಕ್ತ ಸಮಯದಲ್ಲಿ ಅಕ್ರಮಗಳ ದಾಖಲೆ ಬಿಡುಗಡೆಗೊಳಿಸುವೆ'' ಎಂದೂ ಎಚ್ಚರಿಕೆ ನೀಡಿದರು.