ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇತ್ತೀಚಿಗೆ ದಲಿತರ ಮನೆಯಲ್ಲಿ ಸಿದ್ಧಪಡಿಸಿದ್ದ ಪಲಾವ್ ನಿರಾಕರಿಸಿ, ಹೋಟೆಲ್ನಿಂದ ತಿಂಡಿ ತರಿಸಿ ತಿಂದು ವಿವಾದ ಸೃಷ್ಟಿಸಿದ್ದು, ಈ ಸಂಬಂಧ ಅವರ ವಿರುದ್ಧ ಇದೀಗ ದೂರು ದಾಖಲಿಸಲಾಗಿದೆ.
ಕಳೆದ ಶುಕ್ರವಾರ ಯಡಿಯೂರಪ್ಪ ಅವರು ಚಿತ್ರದುರ್ಗ ಜಿಲ್ಲೆಯ ದಲಿತ ಮುಖಂಡ ಕೆಳಗೋಟೆಯ ರುದ್ರಮುನಿ ಮನೆಯಲ್ಲಿ ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರುದ್ರಮುನಿ ಹಾಗೂ ಅವರ ಕುಟುಂಬದವರು ಬಿಸಿ ಪಲಾವ್ ಸಿದ್ಧಪಡಿಸಿದ್ದರು. ಆದರೆ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ನಗರದ ಪ್ರತಿಷ್ಠಿತ ಹೋಟೆಲೊಂದರಿಂದ ಇಡ್ಲಿ, ವಡಾ, ಪೊಂಗಲ್ ತರಿಸಿಕೊಂಡು ರುದ್ರಮುನಿ ಮನೆಯಲ್ಲೇ ಸೇವಿಸಿದರು. ಇದರಿಂದ ಬೇಸರಗೊಂಡ ದಲಿತ ಸಂಘಟನೆಗಳ ಪ್ರಮುಖರು, ನಮಗೆ ಮೊದಲೇ ತಿಳಿಸಿದ್ದರೆ ಯಡಿಯೂರಪ್ಪ ಅವರಿಗೆ ಇಷ್ಟವಾದ ಉಪಾಹಾರವನ್ನೇ ಸಿದ್ಧಪಡಿಸುತ್ತಿದ್ದೆವು. ಇಡ್ಲಿ, ವಡಾ, ಪೊಂಗಲ್ ಬೇಕೆಂದು ಹೇಳಿದ್ದರೆ ರುದ್ರಮುನಿ ಮನೆಯಲ್ಲೇ ಮಾಡಿ ಬಡಿಸುತ್ತಿದ್ದೆವು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ದಲಿತ ಕುಟುಂಬದ ಯುವಕನೊಬ್ಬ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದು, ಅಸ್ಪೃಶ್ಯತೆಗೆ ಬೆಂಬಲ ನೀಡುವ ಮೂಲಕ ನಮಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ದಲಿತ ಕುಟುಂಬದ ಆರೋಪವನ್ನು ಬಿಜೆಪಿ ವಕ್ತಾರರು ಸ್ಪಷ್ಟವಾಗಿ ನಿರಾಕರಿಸಿದ್ದು, ಇದೊಂದು ರಾಜಕೀಯ ಪ್ರೇರಿತ ಬೆಳವಣಿಗೆ ಅಷ್ಟೆ. ಈ ವಿಷಯ ಪ್ರಸ್ತಾಪಿಸುತ್ತಿರುವವರು ಈ ಕೂಡಲೆ ದಲಿತ ಕುಟುಂಬದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics