ಪ್ರಧಾನ ಸುದ್ದಿ

ಜೇಟ್ಲಿ ಹೊಸ ಮಾನಹಾನಿ ಪ್ರಕರಣ: ಕೇಜ್ರಿವಾಲ್ ಗೆ ನೋಟಿಸ್ ನೀಡಿದ ಹೈಕೋರ್ಟ್

Guruprasad Narayana
ನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರ ವಕೀಲ ರಾಮ್ ಜೇಟ್ಮಲಾನಿ ತಮ್ಮ ವಿರುದ್ಧ 'ಮೋಸಗಾರ' ಎಂಬ ಪದ ಬಳಸಿರುವುದಕ್ಕೆ, ದೆಹಲಿ ಮುಖ್ಯಮಂತ್ರಿ ವಿರುದ್ಧ ಮತ್ತೊಂದು ಮಾನಹಾನಿ ಪ್ರಕರಣ ದಾಖಲಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ೧೦ ಕೋಟಿ ರೂ ಪರಿಹಾರ ಕೇಳಿದ್ದಾರೆ. ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿದೆ. 
ಜಂಟಿ ರಿಜಿಸ್ಟಾರ್ ಪಂಕಜ್ ಗುಪ್ತ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿದ್ದು, ಈ ಪ್ರಕರಣದ ವಿಚಾರಣೆಯನ್ನು ಜುಲೈ ೨೬ ಕ್ಕೆ ಪಟ್ಟಿ ಮಾಡಿದ್ದಾರೆ. 
ಕೇಜ್ರಿವಾಲ್ ವಿರುದ್ಧ ದಾಖಲಿಸಿರುವ ಈ ಎರಡನೇ ನಾಗರಿಕ ಮಾನಹಾನಿ ಪ್ರಕರಣದಲ್ಲಿ ಜೇಟ್ಲಿ, ಆಕ್ಷೇಪಾರ್ಹ ಪದಗಳ ಬಳಕೆಯಿಂದ ತಮಗೆ 'ಶಾಶ್ವತ ಹಾನಿ ಮತ್ತು ಅಗೌರವ' ಉಂಟಾಗಿದೆ ಎಂದು ದೂರಿದ್ದಾರೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಮಿತಿಯಲ್ಲಿ (ಡಿಡಿಸಿಎ) ಅರುಣ್ ಜೇಟ್ಲಿ ಅಕ್ರಮ ಎಸಗಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದಕ್ಕೆ ಈ ಹಿಂದೆ ಅವರ ಮತ್ತು ಐವರು ಆಮ್ ಆದ್ಮಿ ಪಕ್ಷದ ವಿರುದ್ಧ ೨೦೧೫ ರಲ್ಲಿ ಜೇಟ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಇದು ಸದ್ಯಕ್ಕೆ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. 
ಮೇ ೧೭ ರಂದು ನಡೆದ ಪ್ರತ್ಯಾರೋಪ ವಿಚಾರಣೆಯಲ್ಲಿ ಹಿರಿಯ ವಕೀಲ ಜೇಟ್ಮಲಾನಿ ತಮ್ಮ ವಿರುದ್ಧ 'ಮೋಸಗಾರ' ಎಂಬ ಪದ ಬಳಸಿದ್ದಕ್ಕೆ ಜೇಟ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. 
SCROLL FOR NEXT