ಪಳನಿಸ್ವಾಮಿ - ನರೇಂದ್ರ ಮೋದಿ
ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಕೆ ಪಳನಿಸ್ವಾಮಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯಕ್ಕೆ ಬಾಕಿ ಉಳಿದಿರುವ ಕೇಂದ್ರದ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ತಮಿಳುನಾಡು ವಿಧಾನಸಭೆಯಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಭಾವಚಿತ್ರ ಅನಾವರಣಗೊಳಿಸಲು ಆಗಮಿಸುವಂತೆ ಪಳನಿಸ್ವಾಮಿ ಪ್ರಧಾನಿ ಆಹ್ವಾನ ನೀಡಿದ್ದಾರೆ.
ಪ್ರಧಾನಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ, ಬಾಕಿ ಉಳಿದರುವ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದೇನೆ ಮತ್ತು ಜುಲೈ ತಿಂಗಳಲ್ಲಿ ವಿಧಾನಸಭೆಯಲ್ಲಿ ಜಯಲಲಿತಾ ಅವರ ಭಾವಚಿತ್ರ ಅನಾವರಣಗೊಳಿಸುವಂತೆ ಹಾಗೂ ಡಿಸೆಂಬರ್ ನಲ್ಲಿ ನಡೆಯುವ ಎಐಎಡಿಎಂಕೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದೇನೆ ಎಂದರು.
ಭೇಟಿಯ ವೇಳೆ ಯಾವುದೇ ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿ ತಮಿಳುನಾಡು ಸಿಎಂ, ಬಾಕಿ ಇರುವ 17,333.28 ಕೋಟಿ ರುಪಾಯಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.