ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಗೂ ಮುಂಚಿತವಾಗಿ ಸ್ವಚ್ಛಗೊಳ್ಳಲು ಮುಸಹಾರ್ ದಲಿತ ಕುಟುಂಬಗಳಿಗೆ ಸಾಬೂನುಗಳನ್ನು ವಿತರಿಸಲಾಗಿತ್ತು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
"ಅವರ ಕೆಟ್ಟ ಮನಸ್ಥಿತಿಯನ್ನು ಸ್ವಚ್ಛ ಮಾಡಿಕೊಳ್ಳಲು ಬಳಸುವ ಸಾಬೂನು ಯಾವುದು? ದಯವಿಟ್ಟು ಅದನ್ನು ಹೇಳಿ" ಎಂದು, ಕುಶಿನಗರ್ ಜಿಲ್ಲೆಯ ಮೈನ್ಪುರ್ ದೀನಪಟ್ಟಿ ಗ್ರಾಮದ ಗ್ರಾಮಸ್ಥರಿಗೆ ಸಾಬೂನುಗಳು, ಸುಗಂಧ ದ್ರವ್ಯಗಳು, ಮತ್ತು ಶಾಂಪುಗಳನ್ನು ವಿತರಿಸಲಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಗುರುವಾರ ನಡೆಯಲಿರುವ ಸಾರ್ವಜನಿಕ ಸಭೆಗೂ ಮುಂಚಿತವಾಗಿ ಸ್ವಚ್ಛ ಮಾಡಿಕೊಳ್ಳಲು ಎರಡು ಸಾಬೂನು ಮತ್ತು ಒಂದು ಶಾಂಪೂ ಪ್ಯಾಕೆಟ್ ಅನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಗಿತ್ತು.