ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನೋಡಬೇಕು ಎನ್ನುವ ಆಸೆ ಯಾರಿಗಿಲ್ಲ ಹೇಳಿ. ಕೇವಲ ಪರ್ವತಾ ರೋಹಿಗಳಿಗೆ ಮಾತ್ರ ಸೀಮಿತವಾಗಿದ್ದ ಎವರೆಸ್ಚ್ ಶಿಖರ ದರ್ಶನ ಇದೀಗ ಸಾಮಾನ್ಯರಿಗೂ ಲಭ್ಯ. ಅದೂ ಕೂಡ ಕೇವಲ 60 ನಿಮಿಷದಲ್ಲಿ..
ಇದೇನಿದು ಅಚ್ಚರಿ.. ದಿನಗಟ್ಟಲೆ ಸತತವಾಗಿ ನಡೆದರೂ ಮುಗಿಯದ ಎವರೆಸ್ಟ್ ಶಿಖರವನ್ನು ಕೇವಲ 60 ನಿಮಿಷದಲ್ಲಿ ವೀಕ್ಷಿಸಲು ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಡಬೇಡಿ. ನಿಜವಾಗಿಯೂ ಎವರೆಸ್ಟ್ ಶಿಖರವನ್ನು ಕೇವಲ 60 ನಿಮಿಷದಲ್ಲಿಯೇ ನೋಡಬಹುದು. ಇದಕ್ಕಾಗಿ ನೀವು ವಿಮಾನಯಾನ ಟಿಕೆಟ್ ಬುಕ್ ಮಾಡಬೇಕು ಅಷ್ಟೇ..
ಹೌದು..ನೇಪಾಳದ ಕೆಲ ವಿಮಾನಯಾನ ಸಂಸ್ಥೆಗಳು ಪ್ರವಾಸಿಗರಿಗಾಗಿ ಮೌಂಟ್ ಎವರೆಸ್ಚ್ ಶಿಖರ ದರ್ಶನ ವ್ಯವಸ್ಥೆ ಮಾಡಿವೆ. ಇದಕ್ಕಾಗಿ ವಿಶೇಷ ವಿಮಾನಗಳನ್ನು ಮೀಸಲಿರಿಸಲಾಗಿದ್ದು, ಈ ವಿಮಾನಗಳು ದಿನದ ನಿರ್ಧಿಷ್ಟ ಸಮಯದಲ್ಲಿ ಪ್ರಯಾಣಿಕರಿಗೆ ಮೌಂಟ್ ಎವರೆಸ್ಟ್ ದರ್ಶನ ಮಾಡಿಸಲಿವೆ. ಮೌಂಟ್ ಎವರೆಸ್ಟ್ ತುತ್ತ-ತುದಿಗೆ ಕರೆದೊಯ್ದು ಅಲ್ಲಿನ ಸುಂದರ ವಾತಾವರಣವನ್ನು ನಿಮಗೆ ದರ್ಶನ ಮಾಡಿಸಲಿವೆ.
ಸೆಪ್ಟೆಂಬರ್-ಡಿಸೆಂಬರ್ ತಿಂಗಳ ಅವಧಿಯಲ್ಲಿ ಮೌಂಟ್ ಎವರೆಸ್ಟ್ ವೀಕ್ಷಣೆಗೆ ಪ್ರಶಸ್ತವಾಗಿರುತ್ತದೆ. ಹೀಗಾಗಿ ಈ ಅವಧಿಯಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನೇಪಾಳದ ಖಾಸಗಿ ವಿಮಾನಯಾನ ಸಂಸ್ಥೆಗಳಾದ ಬುದ್ಧ ಏರ್ ಲೈನ್ಸ್, ಗುಣ ಏರ್ ಲೈನ್ಸ್, ಅಗ್ನಿ ಏರ್ ಲೈನ್ಸ್ ಮತ್ತು ಯತಿ ಏರ್ ಲೈನ್ಸ್ ಸಂಸ್ಥೆಗಳು ಎವರೆಸ್ಟ್ ವೀಕ್ಷಣೆಗೆ ವಿಮಾನಗಳನ್ನು ಮೀಸಲಿರಿಸಿವೆ. ಈ ವಿಮಾನಗಳು ನಿತ್ಯ ಪ್ರಯಾಣಿಕರನ್ನು ಎವರೆಸ್ಟ್ ನತ್ತ ಕೊಂಡೊಯುತ್ತವೆ.
ಟಿಕೆಟ್ ದರ ದುಬಾರಿ ಎಂಬ ಆತಂಕಬೇಡ
ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಚ್ ಶಿಖರ ದರ್ಶನ ದುಬಾರಿಯಾಗಿರಬಹುದು ಎಂಬುದು ನಿಮ್ಮ ಅನಿಸಿಕೆಯಾಗಿರಬಹುದು. ಆದರೆ ಭಾರತ ಮತ್ತು ನೇಪಾಳದ ಪ್ರವಾಸಿಗರಿಗಾಗಿ ವಿಮಾನಯಾನ ಸಂಸ್ಥೆಗಳು ಸಬ್ಸಿಡಿ ನೀಡಿದ್ದು, ಇಂಡೋ-ನೇಪಾಳಿ ಪ್ರವಾಸಿಗರ ಟಿಕೆಟ್ ದರ 6, 078 ರು.ಗಳಾಗಿರುತ್ತದೆ. ಬುದ್ಧ ಏರ್ ಲೈನ್ಸ್ ಮತ್ತು ಇತರೆ ನೇಪಾಳಿ ಏರ್ ಲೈನ್ಸ್ ಸಂಸ್ಥೆಗಳು ಇದೇ ದರವನ್ನು ಪ್ರಕಟಿಸಿದ್ದು, ವಿದೇಶಿ ಪ್ರವಾಸಿಗರ ಟಿಕೆಟ್ ದರ 13, 272 ರು.ಗಳಾಗಿರುತ್ತವೆ.
ನಿತ್ಯ ಎಷ್ಟು ವಿಮಾನಗಳು ಹಾರಾಡುತ್ತವೆ..?
ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಬುದ್ಧ ಏರ್ ಲೈನ್ಸ್ ಸಂಸ್ಥೆ ನಿತ್ಯ ಸುಮಾರು 6 ವಿಮಾನಗಳನ್ನು ಎವರೆಸ್ಟ್ ವೀಕ್ಷಣೆಗೆ ರವಾನಿಸುತ್ತದೆ. ಬೆಳಗ್ಗೆ 6.30ಕ್ಕೆ ಮೊದಲ ವಿಮಾನ ಎವರೆಸ್ಟ್ ಗೆ ಟೇಕ್ ಆಫ್ ಆಗುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಈ ವಿಮಾನದಲ್ಲಿ ಪ್ರತಿಯೊಬ್ಬ ಪ್ರಯಾಣಿಕನಿಗೂ ಕಿಟಕಿ ಪಕ್ಕದಲ್ಲಿಯೇ ಸೀಟು ನೀಡಲಾಗಿರುತ್ತದೆ. ಹೀಗಾಗಿ ಕಿಟಕಿ ಮೂಲಕವಾಗಿ ಹಿಮಾಲಯ ಪರ್ವತಗಳ ಮತ್ತು ಮೌಂಟ್ ಎವರೆಸ್ಟ್ ನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ ವಿಮಾನದಲ್ಲಿರುವ ಸಿಬ್ಬಂದಿಗಳು ಪ್ರಯಾಣದ ವೇಳೆ ಪ್ರಯಾಣಿಕರಿಗೆ ವಿವಿಧ ಪರ್ವತಗಳ ಕುರಿತು ಮಾಹಿತಿ ನೀಡುತ್ತಿರುತ್ತಾರೆ. ಮೂರು ಭಾಷೆಗಳಲ್ಲಿ ಈ ಮಾಹಿತಿ ಲಭ್ಯವಿದ್ದು, ಭೂತಾನ್, ಚೈನೀಸ್ ಮತ್ತು ಇಂಗ್ಲಿಷ್ ನಲ್ಲಿ ಮಾಹಿತಿ ಲಭ್ಯವಾಗಲಿದೆ.
ಯಾವೆಲ್ಲಾ ಪರ್ವತಗಳನ್ನು ನೋಡಬಹುದು..?
ಈ ಪ್ರಯಾಣದ ವೇಳೆ ಸುಮಾರು ಹತ್ತಕ್ಕೂ ಹೆಚ್ಚು ಮಂಜಿನ ಪರ್ವತಗಳು ಕಾಣಸಿಗಲಿದ್ದು, ಮೌಂಟ್ ಎವರೆಸ್ಟ್ (8,848 ಮೀಟರ್ ಎತ್ತರ) ಸೇರಿದಂತೆ ಲ್ಲ್ಯಾಂಗ್ ಟಂಗ್ ಲಿರಂಗ್ (7,234 ಮೀಟರ್ ಎತ್ತರ), ಶಿಶಾ ಪಂಗ್ಮಾ (8,013 ಮೀಟರ್ ಎತ್ತರ), ಡೊರ್ಜೆ ಲಕ್ಪಾ (6,966 ಮೀಟರ್ ಎತ್ತರ), ಮೆಲುಂಗ್ಟ್ಸೇ (7,181 ಮೀಟರ್ ಎತ್ತರ), ಚೋ-ಒಯೋ (8,201 ಮೀಟರ್ ಎತ್ತರ), ಗ್ಯಾಶುಂಗ್ ಕಂಗ್ (7,652 ಮೀಟರ್ ಎತ್ತರ), ಪುಮೋಕಿ (7,161 ಮೀಟರ್ ಎತ್ತರ), ನುಪ್ಟ್ ಸೇ (7,855 ಮೀಟರ್ ಎತ್ತರ), ಲ್ಹೊಟ್ಸೆ (8,516 m), ಚಮ್ಲಾಂಗ್ (7,319 ಮೀಟರ್ ಎತ್ತರ), ಮಕಾಲು(8,463 ಮೀಟರ್ ಎತ್ತರ) ಪರ್ವತಗಳನ್ನು ವೀಕ್ಷಿಸಬಹುದು. ಇದಲ್ಲದೆ ಹಿಂದೂಗಳ ಪವಿತ್ರ ಪರ್ವತವೆಂದೇ ಖ್ಯಾತಿಗಳಿಸಿರುವ ಗೌರಿ-ಶಂಕರ ಪರ್ವತ ಕೂಡ ಇದೇ ಸಾಲಿನಲ್ಲಿ ಕಾಣಿಸುತ್ತದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಪ್ರಯಾಣದ ಅಂತ್ಯದಲ್ಲಿ ಸಿಗಲಿದೆ ಸರ್ಟಿಫಿಕೇಟ್...!
ಇನ್ನು ಮೌಂಟ್ ಎವರೆಸ್ಟ್ ಪ್ರಯಾಣ ಕೈಗೊಂಡ ಪ್ರಯಾಣಿಕರಿಗೆ ಯಾನದ ಅಂತ್ಯದಲ್ಲಿ ಮೌಂಟ್ ಎವರೆಸ್ಟ್ ವೀಕ್ಷಿಸಿದ ಕುರಿತು ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ. ಬುದ್ಧ ಏರ್ ಲೈನ್ಸ್ ಸಂಸ್ಥೆ, "ನಾನು ಮೌಂಟ್ ಎವರೆಸ್ಟ್ ಏರಲಿಲ್ಲ. ಆದರೆ ನನ್ನ ಮನಸ್ಸಿನಿಂದ ಅದರ ಸ್ಪರ್ಶ ಪಡೆದೆ" ಎಂಬ ವಾಕ್ಯವುಳ್ಳ ಸರ್ಟಿಫಿಕೇಟ್ ಅನ್ನು ಪ್ರತಿಯೊಬ್ಬ ಪ್ರಯಾಣಿಕನಿಗೂ ನೀಡುತ್ತದೆ.