ಬೆಂಗಳೂರು: ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನ. ಮುಂದಿನ ವಾರದಿಂದ ಮಕ್ಕಳಿಗೆ ದಸರಾ ರಜೆ ಆರಂಭವಾಗುತ್ತದೆ. ಕಚೇರಿಗೆ ಹೋಗುವವರಿಗೂ ಸರ್ಕಾರಿ ರಜೆ ಇರಬಹುದು. ಈ ಸಂದರ್ಭದಲ್ಲಿ ಕುಟುಂಬ ಸಮೇತ ಹೋಗಲು ಬೆಂಗಳೂರು ಸುತ್ತಮುತ್ತ ನೀವು ನೋಡಬಹುದಾದ ಕೆಲವು ಪ್ರವಾಸಿ ತಾಣಗಳು ಇಂತಿವೆ.
ತೊಟ್ಟಿಕಲ್ಲು ಫಾಲ್ಸ್ : ಬೆಂಗಳೂರು ನಗರದಿಂದ 28-30 ಕಿಲೋ ಮೀಟರ್ ದೂರದಲ್ಲಿ ತೊಟ್ಟಿಕಲ್ಲು ಫಾಲ್ಸ್ ಇದೆ. ಅದನ್ನು ಸಂಕ್ಷಿಪ್ತವಾಗಿ ಟಿಕೆ ಫಾಲ್ಸ್ ಅಂತಲೂ ಕರೆಯುತ್ತಾರೆ. ಇದು ಇರುವುದು ಕನಕಪುರ ಮುಖ್ಯ ರಸ್ತೆಯ ಕಗ್ಗಲಿಪುರ ಹತ್ತಿರ. ಬೆಂಗಳೂರು-ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಬ್ಯಾಲೆಮರದದೊಡ್ಡಿಗೆ ಹೋಗುವಲ್ಲಿ ಟರ್ನ್ ತೆಗೆದುಕೊಂಡರೆ ಮಣ್ಣಿನ ರಸ್ತೆ ಸಿಗುತ್ತದೆ. ಆ ಮಾರ್ಗವಾಗಿ ಹೋದರೆ ಜಲಪಾತ ಸಿಗುತ್ತದೆ. ಅಲ್ಲೊಂದು ಸಣ್ಣ ಮುನೇಶ್ವರ ದೇವಸ್ಥಾನ ಕೂಡ ಇದೆ. ಇಲ್ಲಿನ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ನಮ್ಮ ಜೀವನದ ದುಃಖ ಮತ್ತು ಪಾಪವೆಲ್ಲಾ ಬಗೆಹರಿದು ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ನಂಬಿಕೆಯಿದೆ.
ಮಳೆಗಾಲ ಅಥವಾ ಮಳೆಗಾಲ ಮುಗಿದ ತಕ್ಷಣ ಪ್ರವಾಸಿಗರು ಇಲ್ಲಿಗೆ ಹೋಗುವುದು ಉತ್ತಮ ಎನ್ನುತ್ತಾರೆ ಹೋಗಿ ಬಂದವರು. ನಂತರ ಇಲ್ಲಿ ನೀರು ಕಡಿಮೆಯಾಗುತ್ತದೆ. ದೇವಾಲಯ ಹಾಗೂ ಜಲಪಾತ ಸುತ್ತಮುತ್ತ ಹಸಿರ ರಾಶಿ ನೋಡುಗರ ಕಣ್ಮನ ಸೆಳೆಯುತ್ತದೆ. ಸಣ್ಣ ಪಿಕ್ ನಿಕ್, ಟ್ರಿಪ್ ಮಾಡಬೇಕೆಂದು ಬಯಸಿದವರಿಗೆ ಇದು ಉತ್ತಮ ಜಾಗ. ಹೋಗುವಾಗ ಆಹಾರ ಮತ್ತು ನೀರು ತೆಗೆದುಕೊಂಡು ಹೋಗಲು ಮರೆಯದಿರಿ.
ಮುತ್ಯಾಲಮಡುವು: ನಗರದಿಂದ 40 ಕಿಲೋ ಮೀಟರ್ ದೂರದಲ್ಲಿ ಮುತ್ಯಾಲಮಡುವು ಜಲಪಾತವಿದೆ. ಕಣಿವೆಯಿಂದ ನೀರು ಮುತ್ತಿನಂತೆ ಕೆಳಗೆ ಬೀಳುವುದರಿಂದ ಇದನ್ನು ಪರ್ಲ್ ವ್ಯಾಲಿ ಅಂತಲೂ ಕರೆಯುತ್ತಾರೆ. ಆನೆಕಲ್ ನಿಂದ 5 ಕಿಲೋ ಮೀಟರ್ ದೂರದಲ್ಲಿದೆ. ಸುತ್ತಲೂ ನೀರು, ಆವರಿಸಿರುವ ಬೆಟ್ಟದಿಂದ ಪ್ರವಾಸಿಗರಿಗೆ ಇಷ್ಟವಾಗುತ್ತದೆ. ಇಲ್ಲೊಂದು ಶಿವನ ದೇವಸ್ಥಾನವಿದೆ. ಪಕ್ಷಿ ವೀಕ್ಷಕರು ಮತ್ತು ಟ್ರಕ್ಕಿಗಳಿಗೆ ಇದು ಆಗಾಗ ಭೇಟಿ ನೀಡುವ ಸ್ಥಳ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ತಟ್ಟೆಕೆರೆ ಸರೋವರ ಇದಕ್ಕೆ ಹತ್ತಿರವಾಗುತ್ತದೆ.
ಮಾಕಳಿದುರ್ಗ: ಇದೊಂದು ಸುಂದರವಾದ ಪರ್ವತವಾಗಿದ್ದು, ಪಶ್ಚಿಮ ದಿಕ್ಕಿಗೆ ಸರೋವರವಿದೆ. ಪರ್ವತದ ತುತ್ತತುದಿಯಲ್ಲಿ ಐತಿಹಾಸಿಕ ಕೋಟೆಯೊಂದಿದೆ. ಇದನ್ನು ವಿಜಯನಗರ ಅರಸರ ಕಾಲದಲ್ಲಿ ಸೈನಿಕರಿಗೆ ತರಬೇತಿ ನೀಡಲು ಕಟ್ಟಲಾಗಿತ್ತಂತೆ. ಮಾಕಳಿದುರ್ಗ ಬೆಂಗಳೂರಿನಿಂದ 60 ಕಿಲೋ ಮೀಟರ್ ದೂರದಲ್ಲಿದೆ.ಯಶವಂತಪುರದಿಂದ ರೈಲಿನಲ್ಲಿ ಹೋಗಬಹುದು ಅಥವಾ ಬೆಂಗಳೂರಿನಿಂದ ದೊಡ್ಡಬಳ್ಳಾಪುರ ಮಾರ್ಗವಾಗಿಯೂ ಹೋಗಬಹುದು.
ದೊಡ್ಡಬಳ್ಳಾಪುರದಿಂದ ಮಾಕಳಿದುರ್ಗಕ್ಕೆ 15 ಕಿಲೋ ಮೀಟರ್ ದೂರವಿದೆ. ಪ್ರವಾಸಿಗರು ತಿಂಡಿ, ತಿನಿಸು, ನೀರು ಕಟ್ಟಿಕೊಂಡು ಹೋಗುತ್ತಾರೆ. ಇಲ್ಲಿ ಸೂರ್ಯಾಸ್ತಮಾನ ನೋಡುವುದೇ ಚೆಂದ.
ನಿಮಗೆ ತಂಪಾದ ತಂಗಾಳಿಯಲ್ಲಿ ಹಾಯಾಗಿರಬೇಕೆಂದುಕೊಂಡರೆ ದೇವರಾಯನದುರ್ಗಕ್ಕೆ ಹೋಗಿ. ಬೆಂಗಳೂರಿನಿಂದ 70 ಕಿಲೋ ಮೀಟರ್ ದೂರದಲ್ಲಿ ತುಮಕೂರಿಗೆ ಹತ್ತಿರವಿರುವ ಪರ್ವತ ಪ್ರದೇಶ. ಇಲ್ಲಿನ ಕಲ್ಲಿನ ರಚನೆಗಳು ಅದ್ಭುತವಾಗಿವೆ. ಯೋಗನರಸಿಂಹ ಮತ್ತು ಭೋಗನರಸಿಂಹ ದೇವಾಲಯಗಳಿವೆ. ನೆಲಮಂಗಲ-ಉರ್ದಿಗೆರೆ ಮಾರ್ಗವಾಗಿ ಅಥವಾ ತುಮಕೂರು ಮಾರ್ಗವಾಗಿ ನೀವು ದೇವರಾಯನದುರ್ಗಕ್ಕೆ ಹೋಗಬಹುದು. ತುಮಕೂರಿಗೆ ಹೋಗಿ ಅಲ್ಲಿಂದ ನೇರವಾಗಿ ದೇವರಾಯನದುರ್ಗಕ್ಕೆ ಹೋಗುವ ಬಸ್ಸು ಸಿಗುತ್ತದೆ.