ಪ್ರವಾಸ-ವಾಹನ

ನೆರೆ ಪರಿಸ್ಥಿತಿ ಹಿನ್ನೆಲೆ-ಆ.30ರವರೆಗೆ ಚಿಕ್ಕಮಗಳೂರು ಗಿರಿಧಾಮಗಳಿಗೆ ಪ್ರವಾಸಿಗರ ಭೇಟಿಗೆ ನಿಷೇಧ

Raghavendra Adiga

ಚಿಕ್ಕಮಗಳೂರು: ಈ ತಿಂಗಳ ಕೊನೆಯವರೆಗೆ ತಾಲ್ಲೂಕಿನ ಗಿರಿಧಾಮಗಳಿಗೆ ಪ್ರವಾಸಿ ವಾಹನಗಳ ಪ್ರವೇಶಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ನಿಷೇಧಿಸಿದೆ.  

ಮುಳ್ಳಯ್ಯನಗಿರಿ, ಸೀತಲಾಯನಗಿರಿ ಮತ್ತು ಗುರು ದತ್ತಾತ್ರೇಯ ಬಾಬಾಬುಡನ್‍ ಸ್ವಾಮಿ  ದರ್ಗಾಕ್ಕೆ ಸಂಪರ್ಕಿಸುವ ಕೈಮರ ಚೆಕ್‍ಪೋಸ್ಟ್ ರಸ್ತೆಯಿಂದ ಪ್ರವಾಸಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಕಳೆದ ಐದು ದಿನಗಳಿಂದ  ಗಿರಿಧಾಮಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರವಾಸಿ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ರಸ್ತೆಯಲ್ಲಿ ಭೂಕುಸಿತ ಮತ್ತು ಮರಗಳು ಉರುಳಿ ಬಿದ್ದ ಘಟನೆಗಳು ನಡೆದಿವೆ. ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್  ಸಲ್ಲಿಸಿದ ವರದಿಗಳನ್ನು ಪರಿಗಣಿಸಿ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ನಿಷೇಧ  ಹೇರಲಾಗಿದೆ. 

ಚಿಕ್ಕಮಗಳೂರಿನ ಗಿರಿಧಾಮಗಳು ಮಳೆಗಾಲದಲ್ಲಿ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಭಾರಿ ಮಳೆ  ಮತ್ತು ಭೂಕುಸಿತದಿಂದಾಗಿ ಒಟ್ಟು 240 ಕೋಟಿ ರೂ. ನಷ್ಟ ಉಂಟಾಗಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ  ವ್ಯಾಪಕ ಹಾನಿ ಸಂಭವಿಸಿದ್ದು, 140 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. 

ಚಿಕ್ಕಮಗಳೂರು  ತಾಲ್ಲೂಕಿನಲ್ಲಿ 28 ಕೋಟಿ ರೂ, ಎನ್‌.ಆರ್. ಪುರದಲ್ಲಿ 16 ಕೋಟಿ ರೂ,  ಶೃಂಗೇರಿಯಲ್ಲಿ 20 ಕೋಟಿ, ಹಾಗೂ ಕೊಪ್ಪ ತಾಲ್ಲೂಕಿನಲ್ಲಿ 35 ಕೋಟಿ ರೂ. ನಷ್ಟ ಸಂಭವಿಸಿದೆ. 
   
ಭಾರಿ  ಮಳೆಯಿಂದಾಗಿ ಸುಮಾರು 950 ಕಿ.ಮೀ ರಸ್ತೆ ಹಾನಿಯಾಗಿದೆ. 159 ಸೇತುವೆಗಳು ಮತ್ತು 34  ಕೆರೆಗಳು ಸಹ ಹಾನಿಗೊಂಡಿವೆ. ಪ್ರಾಥಮಿಕ ಅಂದಾಜಿನಂತೆ 1,565 ಹೆಕ್ಟೇರ್  ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗಳು ನಷ್ಟವಾಗಿವೆ. 
ಶಾಲೆಗಳು ಶುಕ್ರವಾರ ಮತ್ತೆ ತೆರೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ಪರಿಹಾರ ಕೇಂದ್ರಗಳಾಗಿ ಸ್ಥಾಪಿಸಿರುವ ಕೆಲ ಶಾಲೆಗಳು ಮುಚ್ಚಲ್ಪಟ್ಟಿರುತ್ತವೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT