ವಿದೇಶಕ್ಕೆ ಹೋಗಬೇಕು ಎನ್ನುವುದು ಬಹಳಷ್ಟು ಜನರ ಕನಸು. ಆದರೆ ಡಾಲರ್ ಮತ್ತು ಯೂರೋ ದೇಶಗಳಲ್ಲಿ ಖರ್ಚು ತುಂಬಾ ಜಾಸ್ತಿಯಾಗುತ್ತದೆ, ಬಜೆಟ್ ದೊಡ್ಡದಾಗುತ್ತದೆ ಎಂದು ಅನೇಕರು ಈ ಆಸೆಯನ್ನು ಪಕ್ಕಕ್ಕೆ ಇಡುತ್ತಾರೆ. ಆದರೆ ನಿಮಗೆ ಗೊತ್ತಾ, ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡಿ ರಾಜಾತಿಥ್ಯ ಅನುಭವಿಸುವ ಅವಕಾಶವಿದೆ. ಯಾಕಂದ್ರೆ, ನಮ್ಮ ಕೇವಲ 10 ರೂಪಾಯಿಗೆ ಅಲ್ಲಿ 1260 ರೂಪಾಯಿ ಮೌಲ್ಯ ಸಿಗುತ್ತದೆ.
ಹೌದು, ಭಾರತೀಯ ರೂಪಾಯಿಗೆ ಭಾರಿ ಮೌಲ್ಯವಿರುವ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾದ ಅದ್ಭುತ ದೇಶ ಉಜ್ಬೇಕಿಸ್ತಾನ್.! ಆ ಕುರಿತ ವರದಿ ಇಲ್ಲಿದೆ:
100 ರೂಪಾಯಿ ಕೊಟ್ಟರೆ 13,000!: ಭಾರತದಿಂದ ಕೇವಲ 3 ಗಂಟೆ ದೂರದಲ್ಲಿರುವ ಈ ದೇಶದಲ್ಲಿ ನಮ್ಮ 10 ರೂಪಾಯಿ ಸರಿಸುಮಾರು 1260 ಸೋಮ್ ಗೆ ಮಾನವಾಗಿದೆ. ಅಂದರೆ 100 ರೂಪಾಯಿ ಕೊಟ್ಟರೆ 12700 ರಿಂದ 13000 ಸೋಮ್ ವರೆಗೆ ಸಿಗುತ್ತದೆ. ಇದರಿಂದಾಗಿ ಅಲ್ಲಿನ ಆಹಾರ ಸ್ಥಳೀಯ ಸಾರಿಗೆ ಶಾಪಿಂಗ್ ಮತ್ತು ಸ್ಮಾರಕಗಳ ಟಿಕೆಟ್ ಎಲ್ಲವೂ ತುಂಬಾ ಅಗ್ಗವಾಗುತ್ತದೆ. ಡಾಲರ್ ಇರುವ ದೇಶಗಳಿಗೆ ಹೋಲಿಸಿದರೆ ಇಲ್ಲಿ ಅರ್ಧದಷ್ಟು ಖರ್ಚಿನಲ್ಲಿ ಪ್ರವಾಸ ಮುಗಿಸಬಹುದು.
ಸುಲಭ ವೀಸಾ ಮತ್ತು ಕಡಿಮೆ ಖರ್ಚಿನ ಟ್ರಿಪ್: ಭಾರತೀಯರಿಗೆ ಉಜ್ಬೇಕಿಸ್ತಾನ್ ನ ಇ ವೀಸಾ ಪ್ರಕ್ರಿಯೆ ತುಂಬಾ ಸರಳವಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ 2 ದಿನದಲ್ಲಿ ವೀಸಾ ಬರುತ್ತದೆ. ವೀಸಾ ಶುಲ್ಕ ಕೂಡ ಕಡಿಮೆಯಾಗಿದೆ. ಫ್ಲೈಟ್, ಹೋಟೆಲ್, ಊಟ ಮತ್ತು ಸೈಟ್ ಸೀಯಿಂಗ್ ಸೇರಿಸಿ 4 ದಿನದ ಟ್ರಿಪ್ 30,000 ರಿಂದ 35,000 ರೂಪಾಯಿಯಲ್ಲಿ ಮುಗಿಸಬಹುದು. ಇದು ಇತರೆ ವಿದೇಶಗಳಿಗೆ ಹೋಲಿಸಿದರೆ ಅರ್ಧದಷ್ಟು ಖರ್ಚು ಮಾತ್ರ.
ನೋಡಲೇಬೇಕಾದ ಮುಖ್ಯ ಸ್ಥಳಗಳು: ಉಜ್ಬೇಕಿಸ್ತಾನ್ ತನ್ನ ಶ್ರೀಮಂತ ಇತಿಹಾಸ ಮತ್ತು ಸುಂದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಸಮರ್ಕಂಡ್ ಬುಖಾರಾ ಮತ್ತು ಖಿವಾದಂತಹ ಯುನೆಸ್ಕೋ ವಿಶ್ವ ಪರಂಪರೆಯ ನಗರಗಳು ಇಲ್ಲಿವೆ. ನೀಲಿ ಗುಮ್ಮಟದ ಮಸೀದಿಗಳು ಮತ್ತು ಹಳೆಯ ಬಜಾರ್ ಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಫೋಟೋಗ್ರಫಿಗೆ ಮತ್ತು ಇನ್ ಸ್ಟಾಗೆ ಇದು ಸೂಪರ್ ತಾಣವಾಗಿದೆ.