ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ತರಹೇವಾರಿ ಜಾಹೀರಾತುಗಳನ್ನು ನೋಡಿದ್ದೇವೆ. ಆದರೆ ಇದೇ ತರದ ಜಾಹೀರಾತುಗಳು ಆನ್ ಲೈನ್ ಗಳಲ್ಲೂ ಇರುತ್ತವೆ. ಅದ್ಯಾವುದೋ ವೆಬ್ ಸೈಟ್ ಅಥವಾ ಫೇಸ್ ಬುಕ್ ಖಾತೆ ಗೆ ಲಾಗಿನ್ ಆದಾಗ ಅಲ್ಲೊಂದು ಇಲ್ಲೊಂದು ಪ್ರಾಯೋಜಿತ ಜಾಹೀರಾತುಗಳ ಲಿಂಕ್ ಗಳನ್ನು ಕಾಣ ಬಹುದು. ಹೀಗೆ ಕಾಣುವ ಲಿಂಕ್ ಗಳಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವಂತಹ ವಿಷಯಗಳೋ ಅಥವಾ ಚಿತ್ರಗಳೋ ಹೈಲೈಟ್ ಆಗಿರುತ್ತವೆ. ಇದೇನು ಲಿಂಕ್ ? ಎಂಬ ಕುತೂಹಲದಿಂದ ಕ್ಲಿಕ್ ಮಾಡಿದರೆ ಅಲ್ಲಿ ಇಲ್ಲೊಂದು ವೆಬ್ ಸೈಟ್ ತೆರೆದು ಕೊಳ್ಳುತ್ತದೆ. ಅಲ್ಲಿ ಮತ್ತಿನ್ನೇನೋ ಮಾಹಿತಿಗಳು ಕ್ಲಿಕ್ ಮಾಡುತ್ತಾ ಹೋದಂತೆ ಇನ್ನೇನೇನೋ ವಿಷಯಗಳು ಅಲ್ಲಿ ಡಿಸ್ ಪ್ಲೇ ಆಗುತ್ತಿರುತ್ತವೆ.
ಕೆಲವೊಂದು ಲಿಂಕ್ ಗಳು ಅಧಿಕೃತ ಮಾಹಿತಿಯ ಲಿಂಕ್ ಗಳೇ ಆಗಿದ್ದರೂ ಹೆಚ್ಚಿನವು ಮೋಸದ ಜಾಲಗಳಾಗಿರುತ್ತವೆ. ಆನ್ ಲೈನ್ ಮೂಲಕ ಜನರು ಗೊತ್ತಿದ್ದೋ, ಇಲ್ಲವೋ ಮೋಸ ಹೋಗುವುದು ಸರ್ವೇ ಸಾಮಾನ್ಯ. ಈ ಮೋಸ ಜಾಲದಲ್ಲಿ ಸಿಕ್ಕು ಹಣ ಕಳೆದುಕೊಂಡವರ ಕಥೆಗಳೆಷ್ಟೋ.
ಯಾವ ರೀತಿಯ ಮೋಸ ಜಾಲಗಳಿರುತ್ತವೆ?
ನನ್ನಲ್ಲಿ ಅಪಾರ ಆಸ್ತಿಯಿದೆ. ನನಗೀಗ ನಿಶ್ಶಕ್ತಿ ಆವರಿಸಿದ್ದು ಆ ಆಸ್ತಿಯನ್ನು ಇನ್ನೊಬ್ಬರಿಗೆ ದಾನ ಮಾಡಬೇಕೆಂಬ ಬಯಕೆಯಾಗಿದೆ. ನೀವು ಅದೃಷ್ಟವಂತರು. ಈ ಎಲ್ಲ ಕೆಲಸಗಳಿಗೆ ನಿಮ್ಮ ಸಹಾಯಬೇಕು. ಇದಕ್ಕೆ ಸಹಾಯ ಮಾಡಿದರೆ ಇರುವ ಆಸ್ತಿಯಲ್ಲಿ ನಿಮಗೆ ಇಂತಿಷ್ಟು ಹಣವನ್ನು ನೀಡುತ್ತಿದ್ದೇನೆ. ಆದರೆ ದೂರದೇಶದಲ್ಲಿರುವ ತನಗೆ ಕಾನೂನುರೀತಿಯಲ್ಲಿ ಹಣ ವರ್ಗಾವಣೆ ಮಾಡುವುದಕ್ಕೆ ನಿಮ್ಮ ಸಹಾಯ ಬೇಕಿದೆ. ಸಹಾಯ ಮಾಡಿ.
ಅದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಕಳಿಸಿಕೊಡಿ ಎಂಬ ಇಮೇಲ್ ನಿಮ್ಮ ಇನ್ ಬಾಕ್ಸ್ ಗೆ ಬಂದಿರುತ್ತದೆ. ಈ ಇಮೇಲ್ ನೈಜೀರಿಯಾ ದಿಂದ ಬಂದಿರುತ್ತದೆ. ಹೆಚ್ಚಿನವರು ಅಲ್ಲಿ ಹೇಳಿರುವ ಕತೆಯನ್ನು ಸತ್ಯ ಎಂದು ನಂಬಿ ಹಣ ಕಳಿಸಿಕೊಟ್ಟಿರುತ್ತಾರೆ. ಆದರೆ ನಂತರ ಆ ಇಮೇಲ್ ನದ್ದಾಗಲೀ, ಅಲ್ಲಿ ಕೊಟ್ಟಿರುವ ಫೋನ್ ನಂಬರ್ ನದ್ದಾಗಲೀ ಸುದ್ದಿಯೇ ಇರುವುದಿಲ್ಲ.
2. ಕ್ರೆಡಿಟ್ ಕಾರ್ಡ್ ಅಥವಾ ಸಾಲ ಕೊಡ್ತೀವಿ
ನಿಮಗೆ ಇಂತಿಷ್ಟು ಸಾಲ ಕೊಡ್ತೀವಿ ಅಥವಾ ಕ್ರೆಡಿಟ್ ಕಾರ್ಡ್ ಕೊಡ್ತೀವಿ ಎಂದು ಹೇಳುವ ಇಮೇಲ್ ಅಥವಾ ವೆಬ್ ಸೈಟ್ ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಕೆಲವೊಂದು ಕ್ರೆಡಿಟ್ ಕಾರ್ಡ್ ಪ್ರೊವೈಡರ್ ಗಳು ತಮ್ಮ ಸೇವೆಗಾಗಿ ಜನರಿಂದ ಶುಲ್ಕ ಈಡುಮಾಡುತ್ತವೆ. ಹಾಗಾಗಿ ಇಂಥಾ ಮೋಸದ ಕಂಪನಿಗಳು ನಿಮಗೆ ಇಂತಿಷ್ಟು ಹಣ (ಅದು ದೊಡ್ಡ ಮೊತ್ತವೇ ಆಗಿರುತ್ತದೆ) ಗಳ ಸಾಲವನ್ನು ನಾವು ನೀಡುತ್ತಿದ್ದೇವೆ. ಅದಕ್ಕಾಗಿ ಮೊದಲು ಇಷ್ಟು ಶುಲ್ಕ ತೆರಬೇಕು ಎಂದು ಹೇಳುತ್ತವೆ. ಇಷ್ಟೊಂದು ದುಡ್ಡು ಸಾಲ ಸಿಗುತ್ತದೆ ಅಂದರೆ ಮುಂಗಡ ಶುಲ್ಕ ನೀಡುವುದಕ್ಕೇನು ಎಂದು ಮುಂದಾಲೋಚನೆಯಿಲ್ಲದೆ ಹಣ ಕಳಿಸುತ್ತಾರೆ. ಅದರ ನಂತರ ನಿಮಗೆ ಇಮೇಲ್ ಮೂಲಕ ಕ್ರೆಡಿಟ್ ಕಾರ್ಡ್ ಕೊಡಲು ಸಾಧ್ಯವಾಗುವುದಿಲ್ಲ ಎಂಬ ಇಮೇಲ್ ಬರುತ್ತದೆ. ಅಷ್ಟೊತ್ತಿಗೆ ಕ್ರೆಡಿಟ್ ಕಾರ್ಡ್ ಆಸೆಯಲ್ಲಿ ಹಣ ಕಳೆದುಕೊಂಡಿರುತ್ತೇವೆ.
ಕಂಗ್ರಾಟ್ಸ್ ನೀವು ಲಾಟರಿ ಗೆದ್ದಿದ್ದೀರಿ ಎಂಬ ಸಂದೇಶವೊಂದು ನಿಮ್ಮ ಮೊಬೈಲ್ ಅಥವಾ ಇಮೇಲ್ ಗೆ ಬಂದಿರುತ್ತದೆ. ಈ ಸಂದೇಶದಲ್ಲಿ ನೀವು ಬೃಹತ್ ಮೊತ್ತದ ಲಾಟರಿ ಗೆದ್ದಿದ್ದೀರಿ. ಈ ಹಣ ನಿಮಗೆ ಸಿಗಬೇಕಾದರೆ ಪ್ರೋಸೆಸಿಂಗ್ ಶುಲ್ಕ ನೀಡಬೇಕಿದೆ. ಇಲ್ಲಿಗೆ ಹಣ ಕಳಿಸಿ ಎಂಬ ಒಕ್ಕಣೆಯೂ ಇರುತ್ತದೆ . ಅರೇ, ಇಷ್ಟೊಂದು ಹಣ ಸಿಗುತ್ತದಲ್ಲಾ, ಸ್ವಲ್ಪ ಹಣ ಕಳಿಸಿದರೇನು?ಎಂದು ಕೊಂಡು ಹಣ ಕಳಿಸಿದವರಿಗೆ ಮೋಸ ಹೋದ ನಂತರ ಗೊತ್ತಾಗುತ್ತದೆ ಹಳ್ಳಕ್ಕೆ ಬಿದ್ದ ಸಂಗತಿ.
ಫಿಶಿಂಗ್ ಎಂಬುದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದು ನಿಮ್ಮನ್ನು ಪೇಚಿಗೆ ಸಿಲುಕಿಸುವ ತಂತ್ರವಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಡಿಜಿಟಲ್ ಕಳ್ಳತನ. ನೀವ್ಯಾವುದೇ ವೆಬ್ ಸೈಟ್ ಗೆ ಲಾಗಿನ್ ಆದಾಗ ನಿಮಗೆ ಗೊತ್ತಿಲ್ಲದಂತೆಯೇ ಕೆಲವು ವೆಬ್ ಸೈಟ್ ಗಳು ನಿಮ್ಮ ಮಾಹಿತಿಯನ್ನು ಕದಿಯುತ್ತಿರುತ್ತವೆ. ನಿಮ್ಮ ಪಾಸ್ ವರ್ಡ್, ನಿಮ್ಮ ಜನ್ಮ ದಿನಾಂಕ ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಕದಿಯುವ ಮೂಲಕ ಸುಲಭವಾಗಿ ನಿಮ್ಮ ಹಣ ದೋಚಬಹುದು.
ಆದ್ದರಿಂದ ಯಾವುದೇ ರೀತಿಯ ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ಆ ವೆಬ್ ಸೈಟ್ ಬಗ್ಗೆ ಸರಿಯಾದ ಮಾಹಿತಿ ನಮಗಿರಬೇಕು. ಅಷ್ಟೇ ಅಲ್ಲ ನಮ್ಮ ಗೌಪ್ಯ ಮಾಹಿತಿ, ಅಂದರೆ ಪಾಸ್ ವರ್ಡ್ , ಪಿನ್ ನಂಬರ್ ಮೊದಲಾದವುಗಳನ್ನು ಗೌಪ್ಯವಾಗಿಯೇ ಇರಿಸಿ ದುರ್ಬಳಕೆಯಾಗದಂತೆ ಎಚ್ಚರವಹಿಸಬೇಕು.
ನಕಲಿ ವೆಬ್ ಸೈಟ್ ಎಂಬುದು ಗೊತ್ತಾಗುವುದು ಹೇಗೆ?
ಯಾವುದೇ ವೆಬ್ ಸೈಟ್ ಅಥವಾ ಲಿಂಕ್ ಓಪನ್ ಮಾಡುವಾಗ ಅದರ ಯುಆರ್ ಎಲ್ ಮೇಲೆ ಕಣ್ಣಾಡಿಸಿ. ಯು ಆರ್ ಎಲ್ https:// ನಿಂದ ಆರಂಭವಾಗಬೇಕು. ಇಲ್ಲಿ S ಅಂದರೆ Secure ಎಂದರ್ಥ. ಕೆಲವೊಂದು ಲಿಂಕ್ ಗಳನ್ನು ಕ್ಲಿಕ್ ಮಾಡುವಾಗಲೇ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಲಿಂಕ್ ಕ್ಲಿಕ್ ಮಾಡಬೇಡಿ ಎಂಬ ಅಲರ್ಟ್ ತೋರಿಸಿದರೆ ಯಾವುದೇ ಕಾರಣಕ್ಕೆ ಅದನ್ನು ಕಡೆಗಣಿಸಬೇಡಿ.
ಉದ್ಯೋಗಾರ್ಥಿಗಳು Job portal ಗಳಲ್ಲಿ ರೆಸ್ಯೂಮೆ ಅಪ್ ಲೋಡ್ ಮಾಡಿರುತ್ತಾರೆ. ಆದರೆ ಕೆಲವೊಂದು ಜಾಲಗಳು ಅಲ್ಲಿಂದ ನಿಮ್ಮ ರೆಸ್ಯೂಮೆ ಕದ್ದು ನಿಮಗೆ ಕೆಲಸ ನೀಡುವ ವಾಗ್ದಾನ ಮಾಡಬಹುದು. ವಿದೇಶದಲ್ಲಿ ಕೆಲಸವಿದೆ ಅದಕ್ಕೆ ಇಂತಿಷ್ಟು ಹಣ ನೀಡಬೇಕು ಎಂದು ನಿಮ್ಮಲ್ಲಿ ಹಣ ಕೇಳಬಹುದು. ಇನ್ನು ಕೆಲವರು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಕಮಿಷನ್ ಟ್ರಾನ್ಸ್ ಫರ್ ಮಾಡಲಾಗುವುದು ಎಂದು ಹೇಳಿ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆಯಬಹುದು. ಹೀಗೆ ಪಡೆದ ಮಾಹಿತಿಗಳಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ದುಡ್ಡು ದೋಚಬಹುದು ಇಲ್ಲವೇ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಬಳಸಿ ಇನ್ಯಾವುದೋ ರೀತಿಯ ವಂಚನೆಗಳನ್ನು ನಡೆಸುವ ಸಾಧ್ಯತೆಗಳಿರುತ್ತವೆ .
ಪ್ರಕೃತಿ ವಿಕೋಪ ಅಥವಾ ಇನ್ಯಾವುದೋ ದುರಂತಗಳು ಸಂಭವಿಸಿದಾಗ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿ, ದೇಣಿಗೆ ನೀಡಿ ಎಂಬ ಇಮೇಲ್ ಗಳು ಬರುತ್ತವೆ. ಆದರೆ ಇವುಗಳೆಲ್ಲವೂ ನಿಜ ಎಂದು ಹೇಳುವುದು ಕಷ್ಟ. ಅದೆಷ್ಟೋ ನಕಲಿ ಸಂಘ ಸಂಸ್ಥೆಗಳು ದುರಂತಗಳ ಹೆಸರು ಹೇಳಿ ಹಣ ದೋಚುತ್ತವೆ. ಆದ್ದರಿಂದ ಯಾವುದೇ ರೀತಿಯಲ್ಲಿ ಆನ್ ಲೈನ್ ಮೂಲಕ ದೇಣಿಗೆ ನೀಡುವಾಗ ಆ ವೆಬ್ ಸೈಟ್ ಅಥವಾ ಸಂಘ ಸಂಸ್ಥೆಯ ಪೂರ್ವಪರಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ ಮತ್ತು ಅತ್ಯಗತ್ಯ.
ನಿಮಗೆ ಸಹಾಯ ಮಾಡಲೇ ಬೇಕು ಎಂದಿದ್ದರೆ ಅಲ್ಲಿ ಕೊಟ್ಟಿರುವ ಸಂಘ ಸಂಸ್ಥೆಗಳಿಗೆ ಕರೆ ಮಾಡಿ ವಿಚಾರಿಸಿ. ಆ ಸಂಸ್ಥೆ ಇಮೇಲ್ ಮೂಲಕ ಹಣ ಸಂಗ್ರಹ ಮಾಡುತ್ತಿದೆಯೇ, ಆ ಲಿಂಕ್ ನಂಬಲರ್ಹವೇ ಎಂದು ಖಚಿತ ಪಡಿಸಿದ ನಂತರವೇ ದೇಣಿಗೆ ನೀಡಲು ಮುಂದಾಗಿ.
ಮನೆಯಿಂದಲೇ ಕೆಲಸ ಮಾಡಿ , ಸಂಪಾದಿಸಿ
ಮನೆಯಲ್ಲಿಯೇ ಕೆಲಸ ಮಾಡಿ ಹಣ ಸಂಪಾದನೆ ಮಾಡಿ ಎಂಬ ಜಾಹೀರಾತುಗಳು ಥಟ್ಟನೆ ಗಮನ ಸೆಳೆಯುತ್ತವೆ. ನಿಮ್ಮ ಮನೆಯಲ್ಲಿ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಕನೆಕ್ಷನ್ ಇದ್ದರೆ ಸಾಕು, ಬಿಡುವಿನ ವೇಳೆಯಲ್ಲಿಯೂ ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು ಎಂದು ಜಾಹೀರಾತು ಹೇಳುತ್ತಿರುತ್ತದೆ. ಈ ಜಾಹೀರಾತಿನ ಮೋಡಿಗೆ ಒಳಗಾದ ಜನ ಲಿಂಕ್ ಕ್ಲಿಕ್ ಮಾಡುತ್ತಾರೆ. ಅದರಲ್ಲಿ ಯಾವ ರೀತಿಯ ಕೆಲಸಗಳಿರುತ್ತವೆ ಎಂಬುದರ ಬಗ್ಗೆ ವಿವರಣೆಗಳನ್ನು ನೀಡಲಾಗುತ್ತದೆ. ಅದೇ ವೇಳೆ ನಿಮ್ಮ ಕೆಲಸಕ್ಕೆ ಇಂತಿಷ್ಟು ಸಂಬಳ. ಆ ಸಂಬಳದ ದುಡ್ಡು ವರ್ಗಾಯಿಸಲು ಬ್ಯಾಂಕ್ ಖಾತೆ ಮಾಹಿತಿಗಳನ್ನು ಅಲ್ಲಿ ದಾಖಲಿಸುವಂತೆ ಹೇಳಲಾಗುತ್ತಿದೆ. ನೀವು ಆ ವೆಬ್ ಸೈಟ್ ಬಗ್ಗೆ ಹೆಚ್ಚು ತಿಳಿದುಕೊಳ್ಳದೆ ಮಾಹಿತಿ ದಾಖಲಿಸುತ್ತೀರಿ. ಇಲ್ಲಿ ಫಿಶಿಂಗ್ ನಡೆಯುವ ಸಾಧ್ಯತೆಗಳು ಅಧಿಕ.
ಅಷ್ಟೇ ಅಲ್ಲದೆ ಇಂಥಾ ಜಾಹೀರಾತುಗಳ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಬೇರೆ ಬೇರೆ ರೀತಿಯ ಲಿಂಕ್ ಗಳು ನಿಮಗೆ ಗೊತ್ತಿಲ್ಲದೆಯೇ ಡೌನ್ ಲೋಡ್ ಆಗಿ ಬಿಡುತ್ತವೆ. ಇಂಥಾ ಪ್ರೋಗ್ರಾಂಗಳಿಂದ ಕಂಪನಿಗಳು per click revenue ಸಂಪಾದನೆ ಮಾಡಿಕೊಳ್ಳುತ್ತವೆ. ನಿಮ್ಮ ಒಂದು ಕ್ಲಿಕ್ ನಿಂದ ಲಾಭ ಪಡೆಯುವ ವೆಬ್ ಸೈಟ್ ಗಳಿರುತ್ತವೆ ಎಂಬುದು ಗಮನದಲ್ಲಿರಲಿ.
ಬೇಸಿಗೆ ಕಾಲದಲ್ಲಿ ಇಂಥಾ ಉಚಿತ ಪ್ರವಾಸ ವಾಗ್ದಾನಗಳನ್ನು ನೀಡುವ ಲಿಂಕ್ ಗಳ ಹಾವಳಿ ಇರುತ್ತದೆ. ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಪ್ರವಾಸ ಸ್ಥಳಗಳ ಬಗ್ಗೆ, ಐಶಾರಾಮಿ ಹೋಟೆಲ್ ಗಳ ಬಗ್ಗೆ ಮಾಹಿತಿ ನೀಡಿ ನೀವೇ ಅದೃಷ್ಟವಂತರು... ಇಲ್ಲಿ ಕ್ಲಿಕ್ ಮಾಡಿ ಎಂದು ಹೇಳಲಾಗುತ್ತದೆ. ಕ್ಲಿಕ್ ಮಾಡುತ್ತಾ ಹೋದಂತೆ ಅಲ್ಲಿ ನಿಮ್ಮ ಮಾಹಿತಿಗಳನ್ನು ದಾಖಲಿಸಲು ಹೇಳಲಾಗುತ್ತದೆ. ಎಲ್ಲವೂ ಉಚಿತ, ಆದರೆ ಟಿಕೆಟ್ ಕಳುಹಿಸಿಕೊಡಲು ಇಂತಿಷ್ಟು ದುಡ್ಡು ಕಳಿಸಿ ಎನ್ನಲಾಗುತ್ತದೆ. ಉದಾಹರಣೆಗೆ 5 ಲಕ್ಷ ವೆಚ್ಚದ ಪ್ರವಾಸಕ್ಕೆ 20 ಸಾವಿರ ಸಾಕು ಎಂದು ಹೇಳಿದರೆ ಯಾರಿಗೆ ತಾನೇ ಖುಷಿಯಾಗಲ್ಲ..ಸರಿ, 20 ಸಾವಿರ ಕಳಿಸಿಕೊಟ್ಟ ನಂತರ ಈ ಬಗ್ಗೆ ಪ್ರವಾಸದ ಬಗ್ಗೆ ನಿಮಗೆ ಯಾವುದೇ ರೀತಿಯ ಮಾಹಿತಿಯೂ ಅಲ್ಲಿಂದ ಸಿಗುವುದಿಲ್ಲ. ನೀವು ನಿಮ್ಮ ದುಡ್ಡು ಕಳೆದುಕೊಂಡಿರುತ್ತೀರಿ ಅಷ್ಚೇ .
ನೀವು ಯಾವುದಾದರೂ ದುಬಾರಿ ವಸ್ತುಗಳನ್ನು ಉದಾಹರಣೆಗೆ ವಾಹನಗಳನ್ನು ಮಾರುವುದಿದ್ದರೆ ನಿಮಗೆ ನೀವು ಹೇಳಿದ ಹಣಕ್ಕಿಂತ ಹೆಚ್ಚು ಪಾವತಿ ಮಾಡಿ ಖರೀದಿಸುವವರಿರುತ್ತಾರೆ ಎಂದರೆ ಎಚ್ಚರಿಕೆ. ಇದೂ ಒಂದು ವ್ಯವಸ್ಥಿತ ಜಾಲ. ನೀವು ಆನ್ ಲೈನ್ ನಲ್ಲಿ ಮಾರಾಟ ಮಾಡಲಿಚ್ಛಿಸುತ್ತಿರುವ ವಸ್ತು ಬಗ್ಗೆ ಮಾಹಿತಿ ನೀಡಿರುತ್ತೀರಿ. ಅಲ್ಲಿ ನಿಮ್ಮ ಸಂಪರ್ಕ ಇಮೇಲ್ , ಫೋನ್ ನಂಬರ್ ಗಳನ್ನು ಕೊಟ್ಟಿರುತ್ತೀರಿ. ಇದನ್ನು ನೋಡಿ ನಿಮಗೆ ಇಮೇಲ್ ಬರುತ್ತದೆ. ಅದರಲ್ಲಿ ನಿಮ್ಮ ವಸ್ತುವನ್ನು ನಾವು ಖರೀದಿಸಲು ಇಚ್ಛಿಸುತ್ತೇವೆ. ನೀವು ಹೇಳಿರುವ ಬೆಲೆಗಿಂತಲೂ ಹೆಚ್ಚಿನ ಬೆಲೆ ನೀಡಲು ನಾವು ಸಿದ್ಧರಿದ್ದೀವಿ ಎಂದಿರುತ್ತದೆ. ದುಡ್ಡು ಜಾಸ್ತಿ ಸಿಗುತ್ತದೆ ಎಂದರೆ ಯಾರು ತಾನೇ ಬೇಡ ಅಂತಾರೆ.
ಸರಿ, ಆದರೆ ಈ ಜಾಲದವರು ನಿಮಗೆ ಮನಿ ಆರ್ಡರ್ ಮೂಲಕವೇ ಹಣ ಪಾವತಿ ಮಾಡುವುದಾಗಿ ಹೇಳುತ್ತಾರೆ. ಅವರು ಹೇಳಿದಂತೆ ನಿಮ್ಮ ವಾಹನ ಖರೀದಿಸಿ ಮನಿ ಆರ್ಡರ್ ಕೂಡಾ ಕೊಡುತ್ತಾರೆ. ಆದರೆ ಆ ಮನಿ ಆರ್ಡರ್ ನ್ನು ಹಣ ವಾಗಿ ಪರಿವರ್ತಿಸಲು ಬ್ಯಾಂಕ್ ಗೆ ಹೋದಾಗಲೇ ಅದು ನಕಲಿ ಎಂಬುದು ಗೊತ್ತಾಗುತ್ತದೆ. ಅಷ್ಟರಲ್ಲಿ ನಿಮ್ಮ ವಾಹನವೂ ನಿಮ್ಮ ಕೈ ತಪ್ಪಿ ಹೋಗಿರುತ್ತದೆ.