ಒಂಟಿಯಾಗಿ ಓಡಾದಬೇಕಾದ ಸಂದರ್ಭದಲ್ಲಿ ತಮ್ಮ ರಕ್ಷಣೆಗಾಗಿ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೀರಿ ? ಎಂಬ ಪ್ರಶ್ನೆಯನ್ನು ಕೇಳಿದಾಗ ನಮಗೆ ಸಿಕ್ಕಿದ ಉತ್ತರಗಳು.
ಪೆಪ್ಪರ್ ಸ್ಪ್ರೇ ಮರೆಯಲ್ಲ
ಮಹಿಳೆಯರು ಮತ್ತು ಅವರ ಹಕ್ಕಿಗಾಗಿಯೇ ದಿನಾಚರಣೆಯೊಂದು ಆರಂಭವಾಗಿ ಶತಮಾನವೊಂದು ಕಳೆದಿದೆ. ನಾವು ಮತ್ತದೇ ಅಸಮಾನತೆ.ಶೋಷಣೆ, ಅಭದ್ರತೆಯ, ಪ್ರಪಂಚದ ಭಾಗವಾಗಿದ್ದುಕೊಂಡೇ ದಿನಾಚರಣೆ ಮಾಡುತ್ತಿದ್ದೇವೆ.. ದಿನೇ ದಿನೇ ಹೆಚ್ಚುತ್ತಿರುವ ಅತ್ಯಾಚಾರದಂತಹ ಪ್ರಕರಣಗಳು, ಹೆಣ್ಣುಕುಲವನ್ನೇ ಟಾರ್ಗೆಟ್ ಆಗಿ ಇಟ್ಟುಕೊಂಡು ಹಣ- ಚಿನ್ನಕ್ಕಾಗಿ ಕೊಲೆ ಮಾಡುವಂತಹ ಕೃತ್ಯಗಳು ಹೆಚ್ಚಾಗಿರುವ ಈ ದಿನಗಳಲ್ಲಿ ನಮ್ಮೊಳಗೆ ಅಭದ್ರತೆಯ ಭಾವವೊಂದು ಗಾಢವಾಗಿ ಕೂತಿರುವುದು ಸುಳ್ಳಲ್ಲ. ಇಂತಹ ಭಯದ ವಾತಾವರಣ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು ಮತ್ತು ಅಲರ್ಟ್ ಆಗಿರಬೇಕೆಂಬ ಪಾಠ ಕಲಿಸಿದೆ.
ಬೆಳಿಗ್ಗೆಯಿಂದ ರಾತ್ರಿಯವರರೆಗೆ ಮನೆಯಿಂದ ಆಚೆಗೇ ಇರಬೇಕಾದ ಪರಿಸ್ಥಿತಿ ಇವತ್ತು ಬಹುಷಃ ಬಹಳ ಮಹಿಳೆಯರ ಪಾಲಿಗಿದೆ. ಅದು ಅವರ ಅನಿವಾರ್ಯತೆ ಕೂಡಾ. ಇಂತದ್ದೇ ಸ್ಥಿತಿಯಲ್ಲಿರುವ ನಾನು ಮನೆಯಿಂದ ಹೊರಗೆ ಕಾಲಿಡುವಾಗ ಬಿ.ಎಮ್.ಟಿ.ಸಿ ಬಸ್‌ಪಾಸ್ ಆದರೂ ಮರೆತೇನು, ಆದರೆ ಬ್ಯಾಗ್‌ನಲ್ಲಿ ಕೈಹಾಕಿದಾಗ ಪಕ್ಕನೇ ಸಿಗುವಷ್ಟು ಅಂತರದಲ್ಲಿ ಪೆಪ್ಪರ್ ಸ್ಪ್ರೇ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮರೆಯುವುದಿಲ್ಲ. ಆಟೋ ಹತ್ತುವಾಗ ಆಟೋ ಡ್ರೈವರ್‌ನ ವಿವರಗಳ ಫೋಟೋವನ್ನು ಕ್ಲಿಕ್ಲಿಸಿ ಹತ್ತಿರದ ಗೆಳೆಯರಿಗೆ ವಾಟ್ಸ್‌ಆಪ್ ಮಾಡಿಬಿಡುತ್ತೇನೆ. ಆದಷ್ಟು ನಿರ್ಜನ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿಕೊಳ್ಳುತ್ತೇನೆ ಮತ್ತು ಅನಿವಾರ್ಯವಾದಂತಹ ಸನ್ನಿವೇಶದಲ್ಲಿ ಆದಷ್ಟು ಎಚ್ಚರಿಕೆಯಿಂದ ಇರುತ್ತೇನೆ. ಆ ಸಮಯದಲ್ಲಿ ಪ್ಯಾಂಟಿನದ್ದೋ, ಜ್ಯಾಕೇಟಿನದ್ದೋ ಜೇಬಿನಲ್ಲಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡಿರುತ್ತೇನೆ. ಇನ್ನು ಬಸ್ಸಿನಲ್ಲಿ ಆಗಬಹುದಾದ ಕಿರುಕುಳ ತಪ್ಪಿಸಿಕೊಳ್ಳಲು ಸೇಫ್ಟಿಪಿನ್ ಒಂದು ಸದಾ ಜೊತೆಯಲ್ಲಿರುತ್ತದೆ. ಇದಿಷ್ಟರ ಮೇಲೆ ನನ್ನೊಳಗೊಂದು ಆತ್ಮವಿಶ್ವಾಸ , ಧೈರ್ಯದ ಜೊತೆ ಇದ್ದೇ ಇದೆ. ಇವೆರಡೂ ಜೊತೆಯಲ್ಲೇ ಇರುವಾಗ ನಮ್ಮನ್ನು ನಾವು ಎಂತಹ ಸಂಕಷ್ಟದಿಂದಲೂ ಪಾರುಮಾಡಿಕೊಳ್ಳಬಹುದೆಂಬುದು ನನ್ನ ಬಲವಾದ ನಂಬಿಕೆ.
-ಸುಷ್ಮಾ ಮೂಡಬಿದಿರೆ
*************
ಡ್ರೈವರ್ ವಿವರ ವಾಟ್ಸ್ಯಾಪ್ ಮಾಡ್ತೇನೆ
ನಾನು ಹೆಚ್ಚಾಗಿ ಆಟೋದಲ್ಲಿ ಓಡಾಡೋದ್ರಿಂದ ನಾನು ಈ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಂಡಿದ್ದಿನಿ
1. ಸಂಜೆ ೮ ಗಂಟೆಯ ನಂತರ ಆಟೋದಲ್ಲಿ ಒಬ್ಬಳೇ ಹೋಗೊಲ್ಲ, ಪ್ರಯಾಣಿಸುವ ಸಂದರ್ಭವಿದ್ದರೆ ಯಾರಾದರು ಜೊತೆಗಿದ್ದರೆ ಮಾತ್ರ ಆಟೋದಲ್ಲಿ ಹೋಗುವೆ ಇಲ್ಲಾಂದ್ರೆ ಬಸ್ಸಿನಲ್ಲಿ ಪಯಣಿಸುವೆ.
2. ಹತ್ತಿರದ ಸ್ಠಳಕ್ಕೆ ಹೋಗೋದಾದ್ರೆ ಟ್ಯಾಕ್ಸಿಗಿಂತ ಆಟೋದಲ್ಲಿ ಹೋಗುವ ಆಯ್ಕೆ ಮಾಡ್ತೇನೆ.
3. ಆಟೋ ಹತ್ತುವಾಗ ಈ ಡ್ರೈವರ್ ನನ್ನನ್ನ ತಲುಪುವ ಸ್ಥಳಕ್ಕೆ ಸುರಕ್ಷಿತವಾಗಿ ಕರೆದೊಯ್ತಾರೆ ಅನ್ನುವ ನಂಬಿಕೆಯಿಂದ ಹತ್ತುತ್ತೇನೆ. ಸಾಮಾನ್ಯವಾಗಿ ಡ್ರೈವರ್ರನ್ನ ಮಾತಾಡಿಸ್ತೇನೆ ಕೆಲವೊಮ್ಮೆ ಒಳ್ಳೆಯ ವಿಚಾರಗಳು ತಿಳಿಯಲು ಸಿಗುತ್ತವೆ. (ಉದಾ: ಆಟೋ ಡ್ರೈವರ್ ಕಂಡಂತೆ ಬೆಂಗಳೂರು/ಐಟಿ ಜನಗಳು/ಅವರ ಲೆಕ್ಕವಿಲ್ಲ ಸಂಬಳಗಳು/ಮಾಲ್ ಸಂಸ್ಕೃತಿಗಳು/ರಿಯಲ್ ಎಸ್ಟೇಟ್ ಬೆಲೆಗಳು/ಟ್ರಾಫಿಕ್ ಸಿಗ್ನಲ್ಗಳು/ಏರುತ್ತಿರುವ ಬೆಲೆಗಳು/ಕೊಡುವ ಮಾಮೂಲಿಗಳು.......ಕಷ್ಟ ಸುಖಗಳು...)
4. ಡ್ರೈವರ್ ವಿವರದ ಫೋಟೋದಲ್ಲಿ ಇರುವವರು ಮತ್ತು ಡ್ರೈವ್ ಮಾಡುತ್ತಿರೋವ್ರು ಒಬ್ಬರೇ ಅಂತ ಖಚಿತಪಡಿಸಿಕೊಳ್ಳೋದು ಒಳ್ಳೆಯದು.
5. ಆಟೋ ಹತ್ತಿದ ನಂತರ ಮೊಬೈಲ್ ಕ್ಯಾಮೆರಾದಿಂದ ಡ್ರೈವರ್ ವಿವರದ ಪ್ರತಿಯ ಫೋಟೋವನ್ನ ಕ್ಲಿಕ್ಕಿಸಿಕೊಂಡು ನಮ್ಮನೆಯವರಿಗ್ಯಾರಿಗಾದರೂ ವಾಟ್ಸ್ಯಾಪ್ ಮಾಡ್ತೇನೆ.
6. ಹೋಗಬೇಕಾದ ಸ್ಥಳದ ದಾರಿ ನನಗೆ ಸರಿಯಾಗಿ ಗೊತ್ತಿಲ್ಲದಿದ್ರೆ ಅಥವಾ ಡ್ರೈವರ್ ಬೇರೆ ಮಾರ್ಗದಲ್ಲಿ ಕರದೊಯ್ಯುತ್ತಿದ್ದಾರೆ ಅನ್ನಿಸಿದ್ರೆ ಮೊಬೈಲಿನಲ್ಲಿನ ಗೂಗಲ್ ಮ್ಯಾಪ್ನ ಸಹಾಯದಿಂದ ಸರಿಯಾದ ಮಾರ್ಗದಲ್ಲಿ ಪಯಣಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವೆ. ಬೇರೆ ಮಾರ್ಗದಲ್ಲಿ ಹೋಗ್ತಿದ್ದಾರೆ ಅಂತ ಅನ್ನಿಸಿದ್ರೆ, ಡ್ರೈವರ್ನ ಕೇಳಿದ್ಮೇಲೆ, ವಿನಾಕಾರಣ ಜಗಳ ಶುರು ಆದ್ರೆ...ಜನರಿರುವ ಕಡೆ/ಟ್ರಾಫ್ಹಿಕ್ ಪೊಲೀಸ್/ ಪೊಲೀಸ್ ಠಾಣೆ ಇರುವೆಡೆ ಆಟೋ ನಿಲ್ಲಿಸಲು ಹೇಳಿ ಮೀಟರ್ರಿನ ಹಣ ಕೊಟ್ಟು ಇಳಿದು, ಮತ್ತೊಂದು ಆಟೋ ಹತ್ತುತ್ತೇನೆ.
7. ಆಟೋ ಜನ ಜಂಗುಳಿ, ಬೇರೆ ವಾಹನಗಳು ಇಲ್ಲದಿರೋ ರಸ್ತೆಗಳಲ್ಲಿ ಹೊಗ್ತಿದ್ದ್ರೆ ಅಥವಾ ಭಯವೆನಿಸಿದರೆ ಮನೆಯವರಿಗ್ಯಾರಿಗಾದ್ರೂ ಫೋನ್ ಮಾಡಿ ಈಗ ನಾನೆಲ್ಲಿದ್ದೇನೆ, ತಲುಪಲು ಎಷ್ಟು ಹೊತ್ತಾಗಬಹುದು ಅಂತ ತಿಳಿಸಿ ಮಾತಾಡಲು ಶುರು ಮಾಡ್ತೇನೆ.
8. ಕಡೆಗೆ ಸುರಕ್ಷಿತವಾಗಿ ಕರೆದೊಯ್ದು ತಲುಪಿಸಿದ್ದಕ್ಕೆ ಡ್ರೈವರ್ಗೆ ಧನ್ಯವಾದ ಹೇಳೋದನ್ನ ಮಾತ್ರ ಮರೆಯೋದಿಲ್ಲ.
-ಸವಿತ ಎಸ್ ಆರ್
*************
ಸಹಾಯಕ್ಕೆ ೧೦೦ ಡಯಲ್ ಮಾಡ್ತೀನಿ
1. ಹಿಂಬದಿ ಸೀಟು ಇದ್ದರೂ, ಮಹಿಳಾ ಮೀಸಲಾತಿ ಸೀಟಿನಲ್ಲಿ ಬಂದು ಕುಳಿತಿರುವ ಪುರುಷನಿಗೆ ಇದು ಮಹಿಳೆಯರ ಸೀಟು ಸ್ವಲ್ಪ ಬಿಡಿ ಎಂದು ಕೇಳಿದೆ. ಬಿಡದಿದ್ದಾಗ, ಮಹಿಳಾ ಸಹಾಯವಾಣಿಗೆ ಕರೆ ಮಾಡುತ್ತೇನೆ ಎಂದು ಹೇಳಿ ಫೋನ್ ಕೈಯಲ್ಲಿಡಿದು, ಕರೆ ಮಾಡುವಂತೆ ನಟಿಸಿದೆ, ಆಗ, ಸೀಟಿನಲ್ಲಿ ಕುಳಿತಿದ್ದವ ಸೀಟು ಬಿಟ್ಟು ನಡೆದ.
2. ಮಹಿಳೆಯರ ಸಾಲಿನ ಮುಂದಿನ ಸೀಟಿನಲ್ಲಿ ಕುಳಿತಿದ್ದಾಗ, ಒಬ್ಬ ಕಾಮುಕ ಬಂದು ಸೀಟಿಗೆ ಒರಗಿ ನಿಂತ, ಹೀಗೆ ಒರಗಿಕೊಂಡೇ ಮೇಲೆ ಬೀಳಲು ಪ್ರಯತ್ನಿಸಿದ, ಒಮ್ಮೆ ಹಿಂದೆ ಹೋಗಿ ಎಂದು ಎಚ್ಚರಿಸಿದೆ, ತುಂಬಾ ಜನರಿದ್ದಾರೆ, ಅಡ್ಜೆಸ್ಟ್ ಮಾಡಿಕೊ ಎಂದ. ತಕ್ಷಣವೇ ಮೊಬೈಲ್ ತೆಗೆದು 100ಕ್ಕೆ ಕರೆ ಮಾಡಿದೆ, ತಕ್ಷಣ ಹಿಂದೆ ಸರಿದ. ಮತ್ತ ಫೋನ್ ಒಳಗಿಡುತ್ತಿದ್ದಂತೆ ಮೇಲೆ ಅವಾಚ್ಯ ಶಬ್ದಗಳಿಂದ ಬಯ್ಯಲು ಪ್ರಾರಂಭಿಸಿದ. ತಕ್ಷಣ ಮತ್ತೆ ಮೊಬೈಲ್ ತೆಗೆದು ಫ್ರಂಟ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಲು ಶುರು ಮಾಡಿದೆ. ತಕ್ಷಣ ಆತ ಬಾಯ್ಮುಚ್ಚಿ ಹಿಂದೆ ಸರಿದ.
3. ಇತರೆ ಯಾವುದೇ ನಂಬರ್ ಗೆ ಕರೆ ಮಾಡಿದರೆ, ಆತ ಹೆದರುವುದಿಲ್ಲ. ಏಕೆಂದರೆ ಅವನು ಹೆದರುವುದೇ 100 ನಂಬರ್ ಗೆ.
4. ಬಸ್ ಅನ್ಯಾಯದ ವಿರುದ್ಧ ದನಿ ಎತ್ತಿದರೆ, ಕಾಮುಕ ತಮ್ಮ ಮುಖವನ್ನು ನೆನಪಿಟ್ಟಕೊಂಡು, ಮರುದಿನ ಬೇರೆ ಎಲ್ಲಾದರೂ ದಾಳಿ ಮಾಡಬಹುದು, ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಬಹುದು. ಹಾಗಾಗಿ, ಹುಡುಗಿಯರು ಮುಖಕ್ಕೆ ಬಟ್ಟೆ ಸುತ್ತಿ ಪ್ರಯಾಣಿಸುವುದು ಒಳ್ಳೆಯದು. ಈಗ ಅವನ ವಿರುದ್ಧ ದನಿ ಎತ್ತಿದರೂ, ಮುಖ ಬಟ್ಟೆಯಿಂದ ಮರೆಯಾಗಿರುತ್ತದೆ. ದಾರಿಯಲ್ಲಿ ಯಾವುದೇ ಭಯವಿಲ್ಲದೇ ಒಡಾಡಬಹುದು.
5. ಮನೆಯಲ್ಲಿ ಸುಳ್ಳು ಹೇಳಿ ಹೊರಗಡೆ ಹೋಗಿರುತ್ತೀರಿ. ಲೇಟಾಯ್ತು ಮನೆಗೆ ಹೋಗಬೇಕಾಯ್ತು. ಆಟೋದಲ್ಲಿ ಹೋಗುತ್ತೀರಿ, ಆಟೋದವನ ಚಲನವಲನ ಅನುಮಾನ ಮೂಡಿಸಿದರೆ, ತಕ್ಷಣ ಯಾರಿಗಾದರೂ ತಾವು ಎಲ್ಲಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ. ಯಾರು ಕರೆ ಸ್ವೀಕರಿಸದಿದ್ದಾಗ, ಸುಮ್ಮನೇ ಫೋನ್ ನಲ್ಲಿ ಮಾತನಾಡುತ್ತಿರುವಂತೆ ನಟಿಸಿ, ನೀವು ಯಾವ ಏರಿಯಾದಲ್ಲಿ ಬರುತ್ತಿದ್ದೀರಿ ಎಂದು ಹೇಳುತ್ತಾ ಬನ್ನಿ.
-ಮೈನಾಶ್ರೀ.ಸಿ
*************
ಮನೆಗೆ ಫೋನ್ ಮಾಡಿ ವಿಷಯ ತಿಳಿಸುತ್ತೇನೆ
ನಮ್ಮದು ಪುಟ್ಟ ಜಿಲ್ಲೆ. ಆದ್ದರಿಂದ ಪರಿಚಿತರ ಆಟೋದಲ್ಲಿ ಮಾತ್ರ ಓಡಾಡುತ್ತೇನೆ.
ಆಟೋ ಹತ್ತುವ ಮುನ್ನ ಆಟೋ ಡ್ರೈವರ್ ಹೇಗಿದ್ದಾನೆ? ಅಂತ ನೋಡಿ ಅವನ ಮುಂದೆಯೇ ಆಟೋ ನಂಬರ್ ನೋಟ್ ಮಾಡುತ್ತೇನೆ.
ನಾನು ಎಲ್ಲಿ ಹೋಗುತ್ತಿದ್ದರೂ ಮೊದಲು ಮನೆಗೆ ಫೋನ್ ಮಾಡಿ ಹೇಳುತ್ತೇನೆ. ಯಾವ ಕಾರಣಕ್ಕೂ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿರಿಸುವುದಿಲ್ಲ.
-ರಜನಿ ಕಾಸರಗೋಡು
*************
ಣಸಿನ ಪುಡಿಯನ್ನು ಹೊತ್ತೊಯ್ಯುತ್ತೇನೆ
ನನಗೆ ಈಗ 38 ವರ್ಷ. ಈ ವಯಸ್ಸಿನಲ್ಲಿ ನನ್ನನ್ನು ಯಾರು ಚುಡಾಯಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಇತ್ತೀಚೆಗೆ ಇಳಿವಯಸ್ಸಿನವರ ಮೇಲೆಯೂ ಕಾಮುಕರು ಮುಗಿ ಬೀಳುತ್ತಿದ್ದು. ನಮ್ಮಂತಹ ಮಹಿಳೆಯರಲ್ಲಿ ತೀವ್ರ ಭೀತಿಯನ್ನುಂಟು ಮಾಡಿದೆ. ಹೀಗಾಗಿ ಪ್ರಸ್ತುತ ನಾನು ಸದಾ ನನ್ನ ಬಳಿ ಚಿಕ್ಕದೊಂದು ಚಾಕು ಮತ್ತು ಮೆಣಸಿನ ಪುಡಿಯನ್ನು ಹೊತ್ತೊಯ್ಯುತ್ತೇನೆ. -
-ಉಷಾ ಉದ್ಯೋಗಿ
*************
ನಾನು ಸದಾ ಶಾಲೆಗೆ ಹೋಗುವ ದಾರಿಯಲ್ಲಿ ಒಂದಿಷ್ಟು ಹುಡುಗರು ನಮ್ಮ ಹುಡುಗಿಯರ ಗುಂಪನ್ನು ಚುಡಾಯಿಸುತ್ತಿರುತ್ತಾರೆ. ನಮ್ಮ ಗುಂಪಿನಲ್ಲಿ ಆ ಹುಡುಗರು ಇಷ್ಟು ದಿನ ನನ್ನ ತಂಟೆಗೆ ಬಂದಿಲ್ಲ. ಆದರೂ ನಾನು ನನ್ನ ಎಚ್ಚರಿಕೆಯಲ್ಲಿದ್ದೇನೆ. ನನ್ನ ಶಾಲಾ ಬ್ಯಾಗಿನಲ್ಲಿ ಸದಾ ಕಾಲ ಅಮ್ಮ ಮನೆಯಲ್ಲಿಯೇ ಮಾಡಿಕೊಟ್ಟ ಪೆಪ್ಪರ್ ಸ್ಪ್ರೇ ಬಾಟಲ್ ಅನ್ನು ಇಟ್ಟುಕೊಂಡಿರುತ್ತೇನೆ. ಯಾರಾದರೂ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಅವರ ಮೇಲೆ ಸ್ಪ್ರೇ ಮಾಡುತ್ತೇನೆ.
ಸುಚಿತ್ರಾ -ಶಾಲಾ ವಿದ್ಯಾರ್ಥಿನಿ