ಅಮ್ಮ ಮತ್ತು ಸುಧೀಂದ್ರ ಬುಧ್ಯ 
ನನ್ನ ಸ್ಫೂರ್ತಿ

ಹಿಮದ ಸೋನೆಯ ನಡುವೆ ಅಮ್ಮ ಎಂಬ ಬೆಚ್ಚನೆಯ ನೆನಪು

ನನ್ನನ್ನು ರೂಪಿಸಿದವಳು ಅಮ್ಮ. ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ನನಗೆ ಆಸಕ್ತಿ ಮೊಳೆಯಲು ಕಾರಣವೇನು ಎಂಬ ಪ್ರಶ್ನೆ ಮೂಡಿದಾಗಲೆಲ್ಲಾ...

ನನ್ನನ್ನು ರೂಪಿಸಿದವಳು ಅಮ್ಮ. ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ನನಗೆ ಆಸಕ್ತಿ ಮೊಳೆಯಲು ಕಾರಣವೇನು ಎಂಬ ಪ್ರಶ್ನೆ ಮೂಡಿದಾಗಲೆಲ್ಲಾ ಬಹುಶಃ ಅಕ್ಷರ ಪ್ರೀತಿ ನನ್ನ ತಾಯಿಯಿಂದ ಗರ್ಭಾವಸ್ಥೆಯಲ್ಲೇ ನನಗೆ ಬಂದಿರಬೇಕು ಎನಿಸುತ್ತದೆ. ನನ್ನನ್ನು ಗರ್ಭದಲ್ಲಿ ಧರಿಸಿ ಅಮ್ಮ, ತ್ರಿವೇಣಿ, ತರಾಸು, ಅನಕೃರನ್ನು ಓದುತ್ತಿದ್ದಳಂತೆ. ಬಹುಶಃ ನಾನು ಹುಂ ಗುಟ್ಟುತ್ತಾ ಕೇಳಿರಬೇಕು. ಹಾಗೆ ಅಮ್ಮನ ಅಭಿರುಚಿ ನನ್ನಲ್ಲಿ ಮೊಳೆತು ಚಿಗುರತೊಡಗಿತು.
ಈ ದೂರದೇಶದಲ್ಲಿ ಹಿಮಮಳೆಯನ್ನು ನೋಡುತ್ತಾ, ಮುದುಡಿ ಹೀಟರ್ ಮುಂದೆ ಕುಳಿತು ಅಮ್ಮನ ನೆನಪು ಮಾಡಿಕೊಳ್ಳುವುದೇ ಒಂದು ಹಿತ. ಅಮ್ಮ ಎಂದೊಡನೆ ಚಿತ್ತಬುತ್ತಿಯಿಂದ ಬೆಚ್ಚನೆಯ ನೆನಪುಗಳು ಸರತಿಯಲ್ಲಿ ಧುಮುಕುತ್ತವೆ. ಆಕೆ ನನ್ನನ್ನು ಶಾಲೆಗೆ ಕೈ ಹಿಡಿದು ಕರೆದೊಯ್ಯುತ್ತಿದ್ದದ್ದು. ರಸ್ತೆ ಹೇಗೆ ದಾಟಬೇಕು ಎಂದು ಹೇಳಿಕೊಟ್ಟದ್ದು. ಸುಭಾಷ್, ಭಗತ್ ಸಿಂಗ್‍ರ ವೇಷಹಾಕಿ ನಲಿದದ್ದು, ಗೆಳೆಯರ ಗುಂಪಿನಲ್ಲಿ ಜಗಳವಾಡಿ ಬಂದಾಗ ’ಇವನನ್ನೂ ಆಟಕ್ಕೆ ಸೇರಿಸಿಕೊಳ್ರೋ’ ಎಂದು ಬಿಟ್ಟು ಬರುತ್ತಿದ್ದದ್ದು, ಆಟದಲ್ಲಿ ಬಿದ್ದು ಅಳುತ್ತಾ ಬಂದಾಗ ಎದೆಗೊತ್ತಿಕೊಂಡು ಮುದ್ದಿಸಿದ್ದು, ಯಾರದ್ದೋ ಮದುವೆ ಮುಂಜಿಗೆಂದು ಶಾಲೆಗೆ ಚಕ್ಕರ್ ಹೊಡೆದ ಮರುದಿನ ಶಾಲೆಗೆ ಬಂದು ಸಬೂಬು ಹೇಳುತ್ತಿದ್ದದ್ದು. ಜ್ವರದ ತಾಪ ಹೆಚ್ಚಿದಾಗ ಒದ್ದೆ ಬಟ್ಟೆ ಹಣೆಗಿಟ್ಟು ಕಾದದ್ದು, ಎಲ್ಲರಿಗೂ ಊಟಕ್ಕೆ ಬಡಿಸಿ ಕಡೆಯಲ್ಲಿ ಮಿಕ್ಕಷ್ಟನ್ನೇ ನಗುತ್ತಾ ಅಮ್ಮ ತಿನ್ನುತ್ತಿದ್ದದ್ದು ಎಲ್ಲವೂ ನೆನಪಾಗುತ್ತದೆ.
ಅಮ್ಮನ ಪ್ರಪಂಚ ತೀರಾ ಚಿಕ್ಕದು. ಆಸೆ, ಕನಸುಗಳ ಪರಿಧಿಯೂ ದೊಡ್ಡದಲ್ಲ. ಅಮ್ಮ ಎಂದಾದರೂ ತಮಗಾಗಿ ಆಸೆಪಟ್ಟು ಏನನ್ನಾದರೂ ಕೊಂಡುಕೊಂಡಿದ್ದರಾ? ಅಪ್ಪನಲ್ಲಿ ಇಂತದ್ದು ಬೇಕು ಎಂದು ಹಟ ಹಿಡಿದದ್ದು ಇದೆಯಾ? ಮಕ್ಕಳು ಬೆಳೆದು ಕೈತುಂಬಾ ಸಂಪಾದಿಸುವ ಹೊತ್ತಿಗಾದರೂ ಅಮ್ಮನಿಗೆ ಇದು ಬೇಕು, ಅದು ಬೇಕು ಎಂಬ ಆಸೆಗಳ್ಯಾಕೆ ಮೊಳೆಯಲಿಲ್ಲ? ಎಂಬೆಲ್ಲಾ ಪ್ರಶ್ನೆಗಳು ನನ್ನನ್ನು ಕಾಡುತ್ತಲೇ ಇರುತ್ತವೆ. ಅಮ್ಮ ತುಂಬಾ ಸೂಕ್ಷ್ಮ. ಅದು ಎಷ್ಟೆಂದರೆ ಮನೆಗೆ ಬಂದವರಿಗೆ ಅರಿಶಿನ ಕುಂಕುಮ ಕೊಡುವುದು ಮರೆತರೆ, ಅಡಿಗೆಯಲ್ಲಿ ಉಪ್ಪು, ಹುಳಿ, ಖಾರ ಕೊಂಚ ಹೆಚ್ಚಾದರೆ ದಿನಪೂರ್ತಿ ಕೊರಗುವಷ್ಟು! ಅಮ್ಮ ಎಂದರೆ ಅಚ್ಚರಿ.
ಅಮ್ಮ ನನ್ನ ಶಕ್ತಿ, ಸ್ಫೂರ್ತಿ ಎನ್ನಿಸುವ ಹೊತ್ತಿಗೇ ಆಕೆ ನನ್ನ ಮಿತಿ ಕೂಡ ಎನಿಸುತ್ತದೆ. ಆಗೆಲ್ಲಾ ಲಕ್ಷಣರಾಯರ ’ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’ ಕವಿತೆ ನೆನಪಾಗುತ್ತದೆ. ಆಕೆ ನನ್ನನ್ನು ತೀರಾ ಎದೆಗೆ ಅವಚಿಕೊಂಡು ಸೂಕ್ಷ್ಮವಾಗಿ ಬೆಳೆಸಿಬಿಟ್ಟಳೇನೋ ಎನ್ನಿಸುವುದೂ ಇದೆ. ಏನೇ ಇರಲಿ, ಆಕೆಯ ಕುಸುರಿ ಕೆಲಸ, ನನ್ನನ್ನು ರೂಪಿಸಿದೆ. ಮದ್ದೂರಿನಲ್ಲಿರುವ ಅಮ್ಮ ಈಗ ನನ್ನ ಬಗ್ಗೆಯೇ ಯೋಚಿಸುತ್ತಿರಬೇಕು. ಮಹಿಳಾ ದಿನದ ನೆಪದಲ್ಲಿ ಆ ತಾಯಿಗೆ ಶರಣು.    

-ಸುಧೀಂದ್ರ ಬುಧ್ಯ
ಸಿನ್ಸಿನಾಟಿ, ಅಮೆರಿಕ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಚಿಕ್ಕಬಳ್ಳಾಪುರ: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಮಹಿಳೆಯರ ಸ್ನಾನ, Video ವೈರಲ್!

Konaseema ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ಮಾಲೀಕ ಸೇರಿ ಕನಿಷ್ಠ 7 ಸಾವು, ಹಲವರಿಗೆ ಗಂಭೀರ ಗಾಯ

ಮೊದಲು 60 ಕೋಟಿ ಠೇವಣಿಯಿಡಿ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿದೇಶ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ನಿರ್ಬಂಧ!

ಪಾಕಿಸ್ತಾನದಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ Pakistan ಲೆಫ್ಟಿನೆಂಟ್ ಕರ್ನಲ್, ಮೇಜರ್ ಸೇರಿದಂತೆ 11 ಪಾಕ್ ಸೈನಿಕರ ಹತ್ಯೆ

SCROLL FOR NEXT