ನಾನು ಕುಸಿದಿರುವಾಗ ನನ್ನ ಕೈ ಎತ್ತಿ ಹಿಡಿದವಳು. ಸಂಸಾರವೆಂದರೆ ಭಯ ಎಂದೆಣಿಸಿದವನಿಗೆ, ಜೀವನ ಅಂದರೆ ಸಂಸಾರ, ಸಂಸಾರವಿಲ್ಲದ ಬದುಕು ಅಪೂರ್ಣ ಎಂದು ಅರಿವು ಮೂಡಿಸಿದವಳು. ಗುರುತೇ ಇಲ್ಲದ ನನಗೆ, ಕನ್ನಡಿಯ ಹಿಡಿದವಳು, ನನ್ನ ಮಡದಿ ಅದಕ್ಕಿಂತ ಹೆಚ್ಚು ಗೆಳತಿ - ಸಜ್ಜಲಾ. ಅವಳು ನನ್ನ ಹೊಸ ಬದುಕಿಗೆ ಪ್ರೇರಣೆ.
ನಾವು ಯಾರಲ್ಲೋ, ಇನ್ನಾವುದಲ್ಲೋ ಪ್ರೇರಣೆಯನ್ನು ಹುಡುಕುತ್ತೇವೆ, ನಮ್ಮೊಂದಿಗಿರುವ ಸಹಜತೆಯನ್ನು ಗ್ರಹಿಸದೆ. ನನ್ನ ಬದುಕೂ ಕೂಡ ಇದರ ಹೊರತಾಗಿಲ್ಲ. ಹುಡುಕದ ಗುಡಿಯಿಲ್ಲ, ಓದದ ಜೀವನ ಚರಿತ್ರಯಿಲ್ಲ, ಪ್ರಯತ್ನಿಸದ ತಂತ್ರ,ಮಂತ್ರ, ಯೋಗ ಸಾಧನೆಗಳಿಲ್ಲ. ಎಲ್ಲ ಕೋಶದ ಮಾತಿಗಿಂತ, ಸಜ್ಜಲಾ ಹೇಳುವ ಮಾತಿನಲ್ಲಿ ಅತೀ ಮೌಲ್ಯವಿತ್ತು. ನನ್ನ ನೂರು ಕಾರಣಗಳಿಗೆ ಅವಳು ಎಲ್ಲಿಂದಲೋ ಪರಿಹಾರ ಹುಡುಕುತ್ತಾಳೆ. ನಾನು ನಗುವಾಗ ನಗುತ್ತಾಳೆ, ನಾನು ನೊಂದಾಗ ತನ್ನ ಬಯಕೆಗಳನ್ನು ಮುಚ್ಚಿಡುತ್ತಾಳೆ. ಅವಳ ಆ ಸಹನೆಯನ್ನು, ನಿರೂಪಣೆಯನ್ನು ನನ್ನ ಕೆಲಸದಲ್ಲಿ ಅಳವಡಿಸಿಕೊಂಡೆ, ಜನ ಕೇಳ್ತಾರೆ "ಯಾವ ಮ್ಯಾನೇಜ್ ಮೆಂಟ್ ಪುಸ್ತಕ ಓದ್ತಿಯಾ?" ಅಂತ!
ಎಮ್.ಕಾಂ. ಮಾಡಿ, ಎಲ್ .ಎಲ್ .ಬಿ.ಮಾಡಿ, ಕಂಪನಿ ಸೆಕ್ರಟರಿಯಂತಹ ಉನ್ನತ ಹುದ್ದೆಯನ್ನು ತ್ಯಜಿಸಿ ತಾಯಿಯಾಗಬಯಸುತ್ತಾಳಲ್ಲ ಅಲ್ಲಿದ್ದಾಳೆ ಮಹಿಳೆ. ಅಲ್ಲಿ ನನಗೆ ಸಿಕ್ಕಿದ್ದು ಬದುಕಿಗೆ ಪ್ರೇರಣೆ. ಸಜ್ಜಲಾ ಯಾವಾಗಲೂ ಹೇಳ್ತಾಳೆ- ಬದುಕು ಅರ್ಥ ಹೀನವಲ್ಲ ಬದುಕಿಗೆ ಕಾರಣವಿದೆ. ಅವಳೂ ಕಂಪನಿ, ವಿದೇಶ, ಹಣ, ಪಾರ್ಟಿ ಇತ್ಯಾದಿ ಗಳ ಹಿಂದೆ ಓಡಬಹುದಿತ್ತು. ಎಲ್ಲವನ್ನೂ ತ್ಯಾಗ ಮಾಡಿ ತಾಯಿಯಾಗಿ ಅವಳು ಸೋತಂತಲ್ಲ, ಅದರಲ್ಲೇ ಬದುಕಿನ ಅರ್ಥ ಇದೆ, ಆನಂದವಿದೆ. ಮಗುವೊಂದರ ಕಿಲಕಿಲ ನಗೆ, ಮನೆಯನ್ನು ನಂದವನವ್ನಾಗಿಸುತ್ತದೆ. ಆ ನಗೆಯ ಹಿಂದೆ ಎಲ್ಲವನ್ನೂ ತ್ಯಜಿಸಿ, ವರುಷಗಟ್ಟಲೆ ಹೊತ್ತು ಹೆತ್ತು ನಿದ್ರೆ ಗೆಟ್ಟ ನೋವಿನಲಿ ನಲಿವು ಕಂಡ ತಾಯಿ ಇರುತ್ತಾಳೆ, ನಮ್ಮನೆಯ ಖುಷಿಯ ಹಿಂದೆ ಸಜ್ಜಲಾ ಇದ್ದಾಳೆ.
ನಿರ್ಬಂಧನೆ ಬೇಡ, ಸ್ವಾತಂತ್ರ್ಯ ಬೇಕು ಎಂದು ಹೊಂದಾಣಿಕೆಗೆ ಹೆದರಿ ಓಡುತ್ತಿದ್ದ ನನಗೆ ಬದುಕಿನ ಅರ್ಥ ಅರಿತು, ತ್ಯಾಗವನ್ನು ಪೂಜಿಸಿ, ಕಷ್ಟಗಳನ್ನು ಹೆಗಲೇರಿಸಿಕೊಂಡು ಹೊರಾಡುವುದನ್ನು ಕಲಿಸಿದವಳು ಸಜ್ಜಲಾ. ಇಂದು ಮಹಿಳೆಯರ ದಿನ, ನನ್ನ ಮಗಳು ತನ್ನ ತಾಯಿಯ ತೋಳಿನಿಂದ ತಪ್ಪಿಸಿಕೊಂಡು ಅಪ್ಪಾ ಎಂದು ಬರುವಾಗ ,ಇಲ್ಲಿ ಸಜ್ಜಲಾಳ ಕಣ್ಣಿನಲಿ ಉಕ್ಕುವ ಸಂತಸದಲ್ಲಿ ನನ್ನ ಬದುಕಿನ ಸಾರ್ಥಕತೆಯ ಕಾಣುತ್ತೇನೆ. ಮಹಿಳೆ ಆ ಶಬ್ಧದಲೇ ಮಹಾ ಎಂಬ ಶಬ್ಧ ಅಡಗಿದೆ. ಸಜ್ಜಲಾ ಎಂಬ ಹೆಣ್ಣು ನನಗೆ ಪ್ರೇರಣೆ ಆಗದಿದ್ದರೆ, ಬದುಕಲಿ ಬರೀ ಹುಣ್ಣೇ ಇರುತ್ತಿತ್ತು. ನಶ್ವರವನ್ನು ಈಶ್ವರ ಎಂದುಕೊಂಡು, ಬದುಕು ನಿರ್ವಾತದಲಿ ಬ್ರಹ್ಮಾಂಡವ ಹುಟ್ಟಿಸುವ ಪ್ರಯೋಗವಾಗುತ್ತಿತ್ತು. ಸಜ್ಜಲಾ ಸಹನಶಕ್ತಿ ನೀನು, ಮಹಿಳಾ ದಿನದ ಶುಭಾಶಯಗಳು.
-ವಿಕ್ರಮ್ ಜೋಷಿ