ವಿದೇಶ

ಇಟಲಿ ನಾವಿಕರ ವಿರುದ್ಧದ ವಿಚಾರಣೆ ಸ್ಥಗಿತಗೊಳಿಸಿ: ಭಾರತ, ಇಟಲಿಗೆ ವಿಶ್ವಸಂಸ್ಥೆ ಸೂಚನೆ

Lingaraj Badiger

ಹ್ಯಾಂಬರ್ಗ್: 2012ರ ಇಬ್ಬರು ಭಾರತೀಯ ಮೀನುಗಾರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ನಾವಿಕರ ವಿರುದ್ಧದ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ವಿಶ್ವಸಂಸ್ಥೆಯ ಪ್ರಾದೇಶಿಕ ನ್ಯಾಯಮಂಡಳಿ ಭಾರತ ಹಾಗೂ ಇಟಲಿಗೆ ಸೂಚಿಸಿದೆ.

ಭಾರತ ವಿರುದ್ಧ ಇಟಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಾಗರ ಕಾನೂನಿನ ಅಂತರಾಷ್ಟ್ರೀಯ ನ್ಯಾಯಮಂಡಳಿಯ ಅಧ್ಯಕ್ಷ ವ್ಲಾಡಿಮಿರ್ ಗೊಲ್ಟಿಸೇನ್ ಅವರು, ಸೆಪ್ಟೆಂಬರ್ 24ರೊಳಗೆ ಪ್ರಕರಣದ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಇಟಲಿ ಸರ್ಕಾರ ಸಲ್ಲಿಸಿರುವ ಹೇಳಿಕೆ ಸಮರ್ಪಕವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಕೋರ್ಟ್, ಮುಂದಿನ ತೀರ್ಮಾನದವರೆಗೂ ಎರಡು ರಾಷ್ಟ್ರಗಳು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಿದೆ.

2012ರ ಫೆಬ್ರುವರಿ 15ರಂದು ಸೇಂಟ್ ಆಂಟೊನಿ ಎಂಬ ಮೀನುಗಾರಿಕಾ ಹಡಗಿನಲ್ಲಿ ಅರಬ್ಬಿ ಸಾಗರದಲ್ಲಿ ಮೀನು ಹಿಡಿಯುತ್ತಿದ್ದ ಜಲಸ್ಟೀನ್‌ (45) ಹಾಗೂ ಅಜೇಶ್ ಬಿಂಕಿ (25) ಎಂಬ ಕೇರಳದ ಮೀನುಗಾರರನ್ನು ಇಟಲಿಯ ಎಂ.ವಿ.ಎನ್ರಿಕಾ ಲೆಕ್ಸಿ ಎಂಬ ತೈಲ ನೌಕೆಯಲ್ಲಿದ್ದ ಆ ದೇಶದ ನಾವಿಕರಾದ ಮಸ್ಸಿಮಿಲಾನೊ ಲಟ್ಟೊರೆ ಹಾಗೂ ಸಾಲ್ವಟೋರ್ ಗಿರೋನ್  ತಮ್ಮ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿ (ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ಭಾವಿಸಿ) ಹತ್ಯೆ ಮಾಡಿದ್ದರು.

ಕೇರಳದ ಪೊಲೀಸರು ಇಟಲಿಯ ಈ ಇಬ್ಬರು ನಾವಿಕರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದರು. ಈ ಮಧ್ಯೆ ನಾವಿಕರು ಕೇರಳ ಹೈಕೋರ್ಟ್‌ನ ಮೊರೆ ಹೋಗಿ ಜಾಮೀನು ಪಡೆದು, ಹತ್ಯೆಯ ಗುರುತರ ಆರೋಪವಿದ್ದಾಗ್ಯೂ ಇಂದಿಗೂ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ಇಷ್ಟಕ್ಕೇ ನಿಲ್ಲದೆ ಭಾರತೀಯ ಪೊಲೀಸರ ತನಿಖೆಯನ್ನು ವಿರೋಧಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲನ್ನು ಏರಿರುವ ಈ ನಾವಿಕರು, ತನಿಖೆಯ ದಿಕ್ಕುತಪ್ಪಿಸಲು ಸಕಲ ಪ್ರಯತ್ನವನ್ನೂ ಮಾಡಿದ್ದಾರೆ.

SCROLL FOR NEXT