ಲಂಡನ್: ಜನರ ಹತ್ಯೆಗಾಗಿ ಬ್ರಿಟನ್‍ಗೆ ಮರಳುತ್ತಿರುವುದಾಗಿ ಐಎಸ್‍ಐಎಸ್ ಉಗ್ರ ಜಿಹಾದಿ ಜಾನ್ ಹೇಳಿದ ಕೆಲವೇ ದಿನಗಳಲ್ಲಿ ಆತನ ವಿರುದ್ಧ ಕಾರ್ಯಾಚರಣೆ ದುಪ್ಪಟ್ಟುಗೊಳಿಸುವ ಆದೇಶ ನೀಡಿರುವ ಪ್ರಧಾನಿ ಡೇವಿಡ್ ಕ್ಯಾಮರೂನ್, ಶೀಘ್ರವೇ ಆತನ ಹತ್ಯೆ ಮಾಡುವಂತೆ ಇಲ್ಲವೇ ಸೆರೆ ಹಿಡಿಯುವಂತೆ ತಮ್ಮ ಗುಪ್ತಚರ ಮತ್ತು ವಿಶೇಷ ಪಡೆಗಳಿಗೆ ಸೂಚಿಸಿದ್ದಾರೆ.
ಕಳೆದ ವಾರ ವಿಡಿಯೋ ಮೂಲಕ ಐಎಸ್ ಪರವಾಗಿ ಹತ್ಯಾಕಾಂಡ ನಡೆಸಲು ತಾನು ಬ್ರಿಟನ್‍ಗೆ ಮರಳುತ್ತಿರುವುದಾಗಿ ಹೇಳಿದ್ದ ಜಿಹಾದಿ ಜಾನ್ ಅಲಿಯಾಸ್ ಮೊಹಮ್ಮದ್ ಎಮ್ವಾಜಿ ಇದೀಗ ಬ್ರಿಟನ್ ಗುಪ್ತಚರ ಪಡೆಗಳ ಗುರಿಯಾಗಿದ್ದಾನೆ. 27 ವರ್ಷದ ಕಂಪ್ಯೂಟರ್ ಪ್ರೋಗ್ರಾಮರ್ ಜಿಹಾದಿ ಜಾನ್, ಸಿರಿಯಾದಲ್ಲಿ ನಡೆದಿದ್ದ ಬ್ರಿಟಿಷ್ ಒತ್ತೆಯಾಳುಗಳ ಶಿರಚ್ಛೇದದಲ್ಲಿ ಭಾಗಿಯಾಗಿದ್ದ.