ವಾಷಿಂಗ್ಟನ್: ಖುದ್ದು ತನ್ನ ಅತ್ತೆ ಮಾವಂದಿರಿಗೇ ಪೂರ್ತಿ ಮುಖ ತೋರದಂತೆ ಬುರ್ಖಾ ಧರಿಸಿ ಓಡಾಡುತ್ತಿದ್ದ 27 ವರ್ಷದ ತಷ್ಫೀನ್ ಮಲಿಕ್ ತನ್ನ ಫೇಸ್‍ಬುಕ್ ಖಾತೆಯನ್ನೂ ನಕಲಿ ಹೆಸರಿನಲ್ಲೇ ನಿರ್ವಹಿಸುತ್ತಿದ್ದಳು.
ಆರು ತಿಂಗಳ ಮಗುವನ್ನು ಪೋಷಿಸುತ್ತಲೇ ಮನೆಯಲ್ಲಿ ಸ್ಪೋಟಕಗಳು ಹಾಗೂ ಮದ್ದುಗುಂಡುಗಳನ್ನು ಪೇರಿಸಿಕೊಂಡಿದ್ದಳು. ಶಸ್ತ್ರಾಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಗಂಡನೊಂದಿಗೆ ದಾಳಿ ಸಂಚನ್ನು ರೂಪಿಸಿದ್ದಳು. ಅಮೆರಿಕದ ನಾಗರಿಕನಾಗಿದ್ದ ಸೈಯದ್ ರಿಜ್ವಾನ್ ಸಂಪ್ರದಾಯಸ್ಥ ಹೆಣ್ಣನ್ನು ಹುಡುಕುತ್ತಿದ್ದಾಗ, ಆನ್‍ಲೈನ್‍ನಲ್ಲಿ ಆತನ ಗಮನಕ್ಕೆ ಬಂದಿದ್ದು ತಷ್ಫೀನ್ ಮಲಿಕ್. ಆಗ ಆಕೆ ಸೌದಿ ಅರೇಬಿಯಾದಲ್ಲಿ ವಾಸವಾಗಿದ್ದಳು.
ತಂದೆಯೊಂದಿಗೆ ಬಾಲ್ಯದಲ್ಲೇ ಸೌದಿಗೆ ತೆರಳಿದ್ದ ತಷ್ಫೀಕ್ ಓದಲೆಂದು ಕೆಲ ಕಾಲ ಪಾಕಿಸ್ತಾನದ ಮುಲ್ತಾನ್‍ನಲ್ಲಿರುವ ಬಹಾವುದ್ದೀನ್ ಝಕಾರಿಯಾ ವಿಶ್ವವಿದ್ಯಾಲಯ ಸೇರಿಕೊಂಡಿದ್ದಳು. ಬಹುಶಃ ಅಷ್ಟೊತ್ತಿಗೆ ರಿಜ್ವಾನ್ ಮತ್ತು ತಷ್ಫೀನ್‍ರಿಬ್ಬರೂ ಉಗ್ರವಾದಿಗಳಾಗಿರಬಹುದು ಮತ್ತು ಈ ಕಾರಣಕ್ಕೆ ಪರಸ್ಪರ ಆಕರ್ಷಣೆ ಬೆಳೆಸಿಕೊಂಡಿರಬಹುದು ಅಥವಾ ಮದುವೆಯಾದ ನಂತರ ಉಗ್ರವಾದದತ್ತ ಆಕರ್ಷಿತರಾಗಿರಬಹುದು ಎಂದು ಅಮೆರಿಕದ ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಅಮೆರಿಕಕ್ಕೆ ಆಗಮಿಸಲು ಆಕೆಗೆ ಸಿಕ್ಕಿದ್ದು ಕೆ1 ಬಿಸಿನೆಸ್ ವಿಸಾ. ರಿಜ್ವಾನ್‍ನನ್ನು ಮದುವೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಸಾ ಪಡೆಯುವಿಕೆ ಸುಲಭವಾಗಿತ್ತು. ಅಲ್ಲಿಂದ ಆಕೆ ಪಕ್ಕಾ ಸಂಪ್ರದಾಯಸ್ಥ ಹೆಂಡತಿಯಾಗಿಯೇ ಗುರುತಿಸಿಕೊಂಡಿದ್ದಳು- ಕ್ಯಾಲಿಪೋರ್ನಿಯಾದ ಸ್ಯಾನ್ ಬರ್ನಾಡಿನೊ ಹತ್ಯಾಕಾಂಡ ನಡೆಯುವ ತನಕ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics