ಲಂಡನ್‍ಗೂ ವ್ಯಾಪಿಸಿದ ಉಗ್ರ ಚಟುವಟಿಕೆ, ಮೂವರಿಗೆ ಇರಿತ
ಶನಿವಾರ ರಾತ್ರಿ ಲಂಡನ್‍ನ ಟ್ಯೂಬ್ ಸ್ಟೇಷನ್ ನಲ್ಲಿ ಚಾಕು ಹಿಡಿದುಕೊಂಡು ಬಂದಿದ್ದ ಉಗ್ರನೊಬ್ಬ ಮೂವರಿಗೆ ಚೂರಿ ಇರಿದ...
ಲಂಡನ್: ಶನಿವಾರ ರಾತ್ರಿ ಲಂಡನ್‍ನ ಟ್ಯೂಬ್ ಸ್ಟೇಷನ್ ನಲ್ಲಿ ಚಾಕು ಹಿಡಿದುಕೊಂಡು ಬಂದಿದ್ದ ಉಗ್ರನೊಬ್ಬ ಮೂವರಿಗೆ ಚೂರಿ ಇರಿದ ಘಟನೆ ನಡೆದಿದೆ.
ಲೈಟನ್ ಸ್ಟೋನ್ ಅಂಡರ್ ಗ್ರೌಂಡ್ ನಲ್ಲಿ ಈ ಘಟನೆ ನಡೆದಿದ್ದು, 29 ವರ್ಷದ ಉಗ್ರ ಏಕಾಏಕಿ ದಾಳಿ ನಡೆಸಿ ಅಲ್ಲಿದ್ದವರ ಮೇಲೆ ಚೂರಿಯಿಂದ ಇರಿದಿದ್ದಾನೆ. ಇದು ಸಿರಿಯಾಗಾಗಿ ಮಾಡುತ್ತಿರುವ ಕೃತ್ಯ ನಾನು ನಿಮ್ಮೆಲ್ಲರ ರಕ್ತದೋಕುಳಿ ಹರಿಸುತ್ತೇನೆ ಎಂದು ಬೊಬ್ಬಿಡುತ್ತಾ ಈತ 3 ಮಂದಿಗೆ ಗಾಯಗೊಳಿಸಿದ್ದಾನೆ. ಈ ಪೈಕಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮತ್ತಿಬ್ಬರಿಗೆ ಅಲ್ಪ ಗಾಯಗಳಾಗಿವೆ.
ಕೊನೆಗೆ ಅಲ್ಲಿಗೆ ಧಾವಿಸಿದ ಪೊಲೀಸರು ತಮ್ಮಲ್ಲಿದ್ದ ಟೇಸರ್ (ವ್ಯಕ್ತಿಯನ್ನು ಕೆಲಕಾಲ ನಿಷ್ಕ್ರಿಯ ಸ್ಥಿತಿಗೆ ತರುವಂತಹ ಸಾಧನ) ನಿಂದ ಶೂಟ್ ಮಾಡಿ, ಆತನನ್ನು ನೆಲಕ್ಕುರುಳಿಸಿದ್ದಾರೆ. ಉಗ್ರ ನೆಲಕ್ಕೆ ಬೀಳುತ್ತಿದ್ದಂತೆ, ಅಲ್ಲಿದ್ದ ಪ್ರಯಾಣಿಕರಲ್ಲೊಬ್ಬ, ಯೂ ಏನ್ಟ್ ನೋ ಮುಸ್ಲಿಂ ಬ್ರುವ್ (ನೀನು ಮುಸ್ಲಿಮನಲ್ಲ, ನೀನೊಂದು ದೊಡ್ಡ ಮುಜುಗರ) ಎಂದು ಘೋಷಣೆ ಕೂಗಿದ್ದು ಕಂಡುಬಂತು.
ಅಚ್ಚರಿಯೆಂದರೆ, ಈ ಮುಸ್ಲಿಂ ವ್ಯಕ್ತಿಯ ಘೋಷಣೆಯನ್ನು ಇಡೀ ಬ್ರಿಟನ್ ಗೆ ಬ್ರಿಟನೇ ಶ್ಲಾಘಿಸಿತು. ಕೆಲವೇ ಶ್ರಣಗಳಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಯೂ ಏನ್ಟ್ ನೋ ಮುಸ್ಲಿಂ ಬ್ರುವ್ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿಬಿಟ್ಟಿತು.
ಇಂತಹುದೊಂದು ಘೋಷಣೆ ಕೂಗಿದ ವ್ಯಕ್ತಿಗೆ ಹ್ಯಾಟ್ಸ್ ಆಫ್, ಇದನ್ನು ಇಸಿಸ್ ಇರುವ ಸ್ಥಳಗಳಲ್ಲಿ ಪ್ರಕಟಿಸಬೇಕು ಮತ್ತು ಈ ಪೋಸ್ಟರ್ ಗಳನ್ನು ವಿಮಾನಗಳ ಮೂಲಕ ಕೆಳಕ್ಕೆ ಬಿಸಾಕಬೇಕು.
ಇದು ಉಗ್ರರಿಗೆ ನೀಡಿದ ತಕ್ಕ ಪ್ರತಿಕ್ರಿಯೆ , ಇದು ನಾನು ನೋಡಿದ ಅತ್ಯುತ್ತಮ ಹ್ಯಾಷ್ ಟ್ಯಾಗ್ ಎಂಬಿತ್ಯಾದಿ ಟ್ವೀಟ್ ಗಳು ಈ ಹ್ಯಾಷ್ ಟ್ಯಾಗ್ ನಲ್ಲಿ ಕಂಡುಬಂದವು.