ವಾಷಿಂಗ್ಟನ್: ರಾಷ್ಟ್ರೀಯ ವೈದ್ಯರ ದಿನಾಚರಣೆ ದಿನವನ್ನು ಸ್ಮರಣೀಯವಾಗಿಸಲು ಆರೋಗ್ಯ ಲೋಕದಲ್ಲೊಂದು ಮಹತ್ತರ ಬೆಳವಣಿಗೆ ಕಂಡುಬಂದಿದೆ.
ಇನ್ನುಮುಂದೆ ಎಚ್‍ಐವಿ ಪೀಡಿತ ಹೆಣ್ಣು ತಾನು ಹಡೆಯಲಿರುವ ಮಗುವಿಗೂ ಸೋಂಕು ತಲುಪುವುದೆಂದು ಆತಂಕ ಪಡುವ ಅಗತ್ಯವಿಲ್ಲ. ಆಕೆ ನಿಶ್ಚಿಂತೆಯಿಂದ ಗರ್ಭಧರಿಸಿ ತಾಯಿಯಾಗಬಹುದು. ಕ್ಯೂಬಾದ ವೈದ್ಯರು ತಾಯಿಯಿಂದ ಮಗುವಿಗೆ ಎಚ್‍ಐವಿ ವೈರಸ್ ಹರಡದಂತೆ ತಡೆಯುವ ಸಾಧನೆಯನ್ನು ಮಾಡುವ ಮೂಲಕ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಕ್ಯೂಬಾ ಈ ಯಶಸ್ವಿ ಸಂಶೋಧನೆ ಮಾಡಿದ ಪ್ರಥಮ ದೇಶ ಎಂಬ ಖ್ಯಾತಿಗೆ ಪಾತ್ರವಾಗಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.
ಎಚ್‍ಐವಿ ಪೀಡಿತರನ್ನು ಗುಣಮುಖಗೊಳಿಸುವ ಸಲುವಾಗಿ ಬಳಕೆ ಮಾಡುತ್ತಿರುವ ಆ್ಯಂಟಿರೆಟ್ರೋವೈರಲ್(ಎಆರ್‍ವಿ) ಎಂಬ ಔಷಧವನ್ನು ಉಪಯೋಗಿಸುವ ಮೂಲಕ ಮಹಾನ್ ಸಾಧನೆ ಮಾಡಲಾಗಿದೆ. ``ಆರೋಗ್ಯಜಗತ್ತಿನಲ್ಲಿ ಇದೊಂದು ಮಹತ್ಸಾಧನೆ. ಎಚ್‍ಐವಿ ವಿರುದ್ಧದ ಸಮರಕ್ಕೆ ಹಾಗೂ ಏಡ್ಸ್ ಮುಕ್ತ ಸಮಾಜದ ನಿರ್ಮಾಣಕ್ಕೆ ಇದು ಪ್ರಮುಖ ಹೆಜ್ಜೆ'' ಎಂದು ಡಬ್ಲುಎಚ್‍ಓ ದ ನಿರ್ದೇಶಕ ಮಾರ್ಗರೆಟ್ ಚಾನ್ ಹೇಳಿದ್ದಾರೆ.
2010ರಿಂದ ಸಂಶೋಧನೆಯಲ್ಲಿ ತೊಡಗಿದ್ದ ಕ್ಯೂಬಾ ವಿಜ್ಞಾನಿಗಳು ಕೊನೆಗೂ ಜಯ ಸಾಧಿಸಿದ್ದಾರೆ. ಪ್ರತಿ ಒಂದು ಲಕ್ಷ ಹೆಚ್‍ಐವಿ ಸೋಂಕಿತರಲ್ಲಿ ಕೇವಲ 50ಕ್ಕಿಂತ ಕಡಿಮೆ ತಾಯಂದಿರು ಸೋಂಕನ್ನು ಮಕ್ಕಳಿಗೆ ದಾಟಿಸುವ ಹಂತಕ್ಕೆ ಇದು ಪರಿಸ್ಥಿತಿಯನ್ನು ಸುಧಾರಿಸಲಿದೆ ಎಂಬುದು ವಿಜ್ಞಾನಿಗಳ ವಿಶ್ವಾಸ.