ಬಾಗ್ದಾದ್: ಮಹಿಳೆಯರ ಅಪಹರಣ ಹಾಗೂ ಅವರನ್ನು ಬಲಾತ್ಕಾರಿಸುವುದನ್ನು ಇಸಿಸ್ ಉಗ್ರರು ಸಮರ್ಥಿಸಿಕೊಂಡಿದ್ದು, ಈ ಕುರಿತು ಹೊರಡಿಸಲಾಗಿರುವ ಕರಪತ್ರದಲ್ಲಿ ತಾವು ಏಕೆ ಈ ಕೃತ್ಯ ಎಸಗುತ್ತಿದ್ದೇವೆಂಬುದನ್ನು ತಿಳಿಸಿದ್ದಾರೆ.
ಇಸಿಸ್ ಉಗ್ರರ ವಶದಲ್ಲಿರುವ ಇರಾಕ್ ನ ಮೊಸೂಲ್ ನಗರದಲ್ಲಿ ಈ ಬಗ್ಗೆ ಕೆಲ ಕರ ಪತ್ರಗಳು ಹಂಚಿಕೆಯಾಗಿದ್ದು, ಇದರಲ್ಲಿ ಮಕ್ಕಳು ಮತ್ತು ಮಹಿಳೆಯ ಅಪಹರಣ, ಲೈಂಗಿಕ ಗುಲಾಮಗಿರಿ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಉಗ್ರರು ತಮ್ಮದೇ ಆದ ಸಮರ್ಥನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯರು ಮತ್ತು ಮಕ್ಕಳು ತಮ್ಮ ಸಿದ್ದಾಂತವನ್ನು ಒಪ್ಪದ ಕಾರಣ ತಾವು ಅವರ ಮೇಲೆ ಬಾಲತ್ಕಾರ ಮಾಡುತ್ತಿರುವುದಾಗಿ ಕರ ಪತ್ರದಲ್ಲಿ ಉಗ್ರರು ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮನ್ನು ತಾವು ಇಸ್ಲಾಂ ಧರ್ಮದ ಹೋರಾಟಗಾರರು ಎಂದು ಕರೆದುಕೊಂಡಿರುವ ಉಗ್ರರು, ಮುಸ್ಲಿಂ ಮಹಿಳೆಯರು ಸೇರಿದಂತೆ ಮುಸ್ಲಿಮೇತರ ಮಹಿಳೆಯರು ಮತ್ತು ಮಕ್ಕಳನ್ನು ಮಾರಾಟ ಮಾಡಬಹುದು ಹಾಗೂ ಇತರರಿಗೆ ಕೊಡುಗೆಯಾಗಿಯೂ ನೀಡಬಹುದೆಂದು ಉಗ್ರರು ಹೇಳಿಕೊಂಡಿದ್ದಾರೆ.
"ಕನ್ಯೆಯರು ಮಾತ್ರವಲ್ಲದೆ ಲೈಂಗಿಕ ಕ್ರಿಯೆಗೆ ಸಿದ್ಧವಿರುವ ಯಾವುದೇ ಹೆಣ್ಣುಮಕ್ಕಳೊಂದಿಗೆ ತಾವು ಲೈಂಗಿಕ ಇಚ್ಛೆ ತೀರಿಸಿಕೊಳ್ಳಬಹುದು. ಆದರೆ ಅವರ ಗರ್ಭಕೋಶ ಶುದ್ಧವಾಗಿರಬೇಕು. ಅಲ್ಲದೆ ಮಹಿಳೆಯರನ್ನು ಥಳಿಸುವುದಕ್ಕೆ ಧರ್ಮದಲ್ಲಿ ಅವಕಾಶವಿದ್ದು, ಶಿಸ್ತಿನ ಉಲ್ಲಂಘನೆಯಾದರೆ ಖಂಡಿತ ಅವರು ಶಿಕ್ಷೆಗೆ ಅರ್ಹರಾಗಿರುತ್ತಾರೆ. ಮಹಿಳೆಯರು ಆಸ್ತಿಯಾಗಿದ್ದು, ಅವರನ್ನು ಕೊಳ್ಳ ಬಹುದು ಮತ್ತು ಮಾರಬಹುದು. ಅಥವಾ ಇಚ್ಛಿಸಿದರೆ ಇತರರಿಗೆ ದಾನವಾಗಿಯೂ ನೀಡಬಹುದು" ಎಂದು ಉಗ್ರರು ತಮ್ಮ ಲಜ್ಜೇಗೇಡಿ ತನವನ್ನು ಕರಪತ್ರದಲ್ಲಿ ಬಿಚ್ಚಿಟ್ಟಿದ್ದಾರೆ.
ಸಿರಿಯಾ ಮತ್ತು ಇರಾಕಿನಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಐಎಸ್ ಉಗ್ರರ ದೌರ್ಜನ್ಯದಿಂದಾಗಿ ತತ್ತರಿಸಿ ಹೋಗಿದ್ದು, ಮಹಿಳೆಯರನ್ನು ಉಗ್ರರು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಬಳಸುತ್ತಿರುವುದಲ್ಲದೇ ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಕ್ರೂರ ರೀತಿಯಲ್ಲಿ ಹತ್ಯೆ ಮಾಡುತ್ತಿದ್ದಾರೆ. ತಾವು ವಶಪಡಿಸಿಕೊಂಡಿರುವ ಪಟ್ಟಣಗಳಲ್ಲಿ ಉಗ್ರರ ಹಾವಳಿ ಮಿತಿ ಮೀರಿದ್ದು, ನಾಗರಿಕರು ಪ್ರತಿ ಕ್ಷಣವೂ ಜೀವ ಭಯದಿಂದ ತತ್ತರಿಸುತ್ತಿದ್ದಾರೆ.