ವಿದೇಶ

ಕಾಂಬೋಡಿಯಾ ಅರಣ್ಯಕ್ಕೆ ದೇವತೆಯಾದ ನಟಿ

Lingaraj Badiger

ಲಂಡನ್: ಹಾಲಿವುಡ್ ನಟಿ ಏಂಜಲಿನಾ ಜೂಲಿಯ ಮಾನವೀಯ ಮೌಲ್ಯ ಮತ್ತೊಮ್ಮೆ ಅನಾವರಣಗೊಂಡಿದೆ. ಈ ಬಾರಿ ಜೂಲಿ ವನ್ಯ ಮೃಗಗಳ ಪಾಲಿಗೆ ಹೆಸರಿಗೆ ತಕ್ಕಂತೆ ಸಾಕ್ಷಾತ್ ಏಂಜೆಲ್(ದೇವತೆ) ಆಗಿದ್ದಾಳೆ. ಕಾಂಬೋಡಿಯಾದಲ್ಲಿ 1.20ಲಕ್ಷ ಎಕರೆ ಜಮೀನು ಖರೀದಿಸಿರುವ ನಟಿ ಅದನ್ನು ಅಭಯಾರಣ್ಯವನ್ನಾಗಿ ಮಾಡಿ ಜಗತ್ತಿನ ಗಮನ ಸೆಳೆದಿದ್ದಾರೆ.

2003ರಲ್ಲಿ ತನ್ನ ಪುತ್ರ ಮ್ಯಾಡಾಕ್ಸ್‌ಗೆ ಕಾಂಬೋಡಿಯಾದ ಪ್ರಾಕೃತಿಕ ವೈಭವದ ಪರಿಚಯ ಇರಲೆಂದು ಅಲ್ಲಿನ ಸುಂದರ ಪ್ರಕೃತಿಯ ನಡುವೆ ಮನೆ ಕಟ್ಟಿಸಿದ್ದು ಇದೀಗ ಈ ಅಭಯಾರಣ್ಯದ ಸೃಷ್ಟಿಗೆ ದಾರಿ ಮಾಡಿಕೊಟ್ಟಿದೆ.

ಕಾಡುಗಳ್ಳರ ಹಿಡಿತದಿಂದ ನಲುಗಿದ್ದ ಅಲ್ಲಿನ ಅರಣ್ಯ ಸಂಪತ್ತು ಹಾಗೂ ಪ್ರಾಣಿಗಳು ಇದೀಗ ಸುರಕ್ಷಿತ. ಅಚ್ಚರಿಯೆಂದರೆ ಒಂದು ಕಾಲದಲ್ಲಿ ಬೇಟೆಗಾರರಾಗಿದ್ದವರನ್ನೇ ಏಂಜೆಲಿನಾ ಈಗ ಅಭಯಾರಣ್ಯಕ್ಕೆ ಅಧಿಕಾರಿಗಳನ್ನಾಗಿ ಮಾಡಿದ್ದಾರೆ.

ಕರಡಿಗಳು, ಏಷ್ಯನ್ ಆನೆಗಳು, ಇಂಡೋಚೀನಿ ಹುಲಿಗಳು ಕಾಡುಗಳ್ಳಲರ ಅಟ್ಟಹಾಸಕ್ಕೆ ಬಲಿಯಾಗುತ್ತಿರುವುದನ್ನು ಕಂಡಿದ್ದ ಏಂಜೆಲಿನಾ, 60 ಸಾವಿರ ಹೆಕ್ಟೇರು ಜಾಗ ಖರೀದಿಸಿ ಅದನ್ನು ಸಂರಕ್ಷಿತ ಅರಣ್ಯವನ್ನಾಗಿ ಪರಿವರ್ತಿಸಿ ಅದಕ್ಕೆ ತನ್ನ ಪುತ್ರನ ಹೆಸರೇ ಇಟ್ಟಿದ್ದಾಳೆ. ಮ್ಯಾಡಾಕ್ಸ್ ಜೂಲಿ ಪ್ರಾಜೆಕ್ಟ್(ಎಂಜೆಪಿ) ಎಂಬ ಹೆಸರಿನಿಂದ ಈಗ ಈ ಪ್ರದೇಶ ಕರೆಯಲ್ಪಡುತ್ತಿದೆ. ಆಕೆಗೆ 2005ರಲ್ಲಿ ಕಾಂಬೋಡಿಯಾದ ನಾಗರಿಕತ್ವ ನೀಡಿದ್ದು ಈ ಯೋಜನೆಗೆ ಇನ್ನಷ್ಟು ಪೂರಕವಾಯಿತು.

ಎಂಜೆಪಿಯೊಂದಿಗೆ ಸುತ್ತಲಿನ ಸುಮಾರು 6 ಸಾವಿರ ಗ್ರಾಮಸ್ಥರು ಕೈಜೋಡಿಸಿದ್ದಾರೆ. 72 ಮಂದಿಯನ್ನು ರೇಂಜರ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಜೂಲಿಯೇ ಅಲ್ಲಿನ ಗ್ರಾಮಸ್ಥರಿಗೆ ರಸ್ತೆ ವ್ಯವಸ್ಥೆ, ಶಾಲೆ, ಸೋಯಾ ಹಾಲಿನ ಫ್ಯಾಕ್ಟರಿ ಎಲ್ಲವನ್ನೂ ಮಾಡಿಕೊಟ್ಟಿದ್ದಾಳೆ.

ಕಾಂಬೋಡಿಯಾದಲ್ಲಿ ಜೂಲಿ ಶಾಲೆ ತೆರೆದಿರುವುದೇ ಅಲ್ಲದೆಸ ಎಚ್‌ಐವಿ ಪೀಡಿತ ಮಕ್ಕಳಿಗಾಗಿ ಒಂದು ಆರೋಗ್ಯ ಕೇಂದ್ರವನ್ನೂ ಆರಂಭಿಸಿದ್ದಾಳೆ. ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಜಗತ್ತಿನ ಸಿಪ್ರಿಯರ ಮನಗೆದ್ದಿದ್ದ ಏಂಜೆಲಿನಾ ತೆರೆಯ ಆಚೆಯೂ ತನ್ನ ಸಾಮಾಜಿಕ ಹಾಗೂ ಜನಪರ ಚಟುವಟಿಕೆಗಳಿಂದ ಹೆಸರಾಗುತ್ತಿದ್ದಾರೆ.

SCROLL FOR NEXT