ವಾಶಿಂಗ್ಟನ್: ಭಾರತೀಯ ವಿಜ್ಞಾನಿ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಕ್ ಕಲಾಂ ಅವರಿಗೆ ಸಂತಾಪ ಸೂಚಿಸಿರುವ ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ, ಲಕ್ಷಾಂತರ ಜನಕ್ಕೆ ಕಲಾಂ ಸ್ಫೂರ್ತಿಯಾಗಿದ್ದರು ಹಾಗೂ ಎರಡೂ ದೇಶಗಳ ಬಾಹ್ಯಾಕಾಶ ಯೋಜನೆಗಳ ಬೆಸುಗೆಗೆ ಕಾರಣಕರ್ತರಾಗಿದ್ದರು ಎಂದಿದ್ದಾರೆ.
"ಅಮೇರಿಕನ್ ಜನತೆಯ ಪರವಾಗಿ, ಡಾ. ಎ ಪಿ ಜೆ ಅಬ್ದುಲ್ ಕಲಾಂ ದಿವಂಗತರಾಗಿದ್ದಕ್ಕೆ ಭಾರತೀಯ ಜನರಿಗೆ ಸಂತಾಪ ಸೂಚಿಸುತ್ತಿದ್ದೇನೆ" ಎಂದು ಹೇಳಿಕೆಯಲ್ಲಿ ಒಬಾಮಾ ತಿಳಿಸಿದ್ದಾರೆ.
"ವಿಜ್ಞಾನಿ ಮತ್ತು ಧೀಮಂತ, ಸರಳ ಪ್ರಾರಂಭದಿಂದ ಭಾರತದ ಅತ್ಯುನ್ನತ ನಾಯಕನಾಗಿ ಬೆಳೆದು ಭಾರತ ಮತ್ತು ವಿದೇಶಗಳಲ್ಲಿ ಅಪಾರ ಮನ್ನಣೆ ಪಡೆದಿದ್ದರು" ಎಂದು ಆಫ್ರಿಕಾ ಪ್ರವಾಸದಲ್ಲಿರುವ ಒಬಾಮಾ ತಿಳಿಸಿದ್ದಾರೆ.
ಭಾರತ ಮತ್ತು ಅಮೇರಿಕಾ ಸಂಬಂಧಕ್ಕೆ ಪ್ರವಾದಿಯಂದಿದ್ದ ಕಲಾಂ ೧೯೬೨ರಲ್ಲಿ ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಭೇಟಿ ವೇಳೆಯಲ್ಲಿ ಎರಡು ದೇಶಗಳ ಬಾಹ್ಯಾಕಾಶ ಸಂಶೋಧನಾ ಸಂಬಂಧದ ಏಳ್ಗೆಗೆ ರೂವಾರಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.
"ಅಬ್ದುಲ್ ಕಲಾಂ ೧೧ನೆಯ ರಾಷ್ಟ್ರಪತಿಯಾಗಿದ್ದ ಸಮಯದಲ್ಲಿ ಭಾರತ ಮತ್ತು ಅಮೆರಿಕಾದ ಸಂಬಂಧದಲ್ಲಿ ಎಂದೂ ಕಂಡರಿಯದ ಉನ್ನತಿ ಹೊಂದಿತು" ಎಂದಿದ್ದಾರೆ.
"ಜನಗಳ ರಾಷ್ಟ್ರಪತಿ ಎಂದು ಸೂಕ್ಷ್ಮತೆಗೆ ಹೆಸರಾಗಿದ್ದ ಕಲಾಂ ಅವರ ಸಾರ್ವಜನಿಕ ಸೇವೆಯಲ್ಲಿಟಿದ್ದ ಅಪಾರ ಶ್ರದ್ದೆ ಮತ್ತು ವಿನಯ ಲಕ್ಷಾಂತರ ಭಾರತೀಯರು ಮತ್ತು ವಿಶ್ವದಾದ್ಯಂತ ಅವರ ಅಭಿಮಾನಿಗಳಿಗೆ ಸ್ಫೂರ್ತಿ" ಎಂದು ಒಬಾಮಾ ತಿಳಿಸಿದ್ದಾರೆ.