ಇಸ್ಲಾಮಾಬಾದ್: ಈ ವರ್ಷದ ಪ್ರಾರಂಭದಲ್ಲಿ ೧೫ ಜನರನ್ನು ಆಹುತಿಯಾಗಿಸಿಕೊಂಡ ಎರಡು ಚರ್ಚ್ ಗಳ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಲಾಹೋರಿನ ಕ್ರಿಶ್ಚಿಯನ್ ಸಮುದಾಯ ಹೆಚ್ಚು ವಾಸವಿರುವ ಯೌಹನಾಬಾದ್ ಪ್ರದೇಶದಲ್ಲಿ ಮಾರ್ಚ್ ೧೫ ರಂದು ತಾಲಿಬಾನಿನ ಆತ್ಮಹತ್ಯಾ ದಳದವರು ಸ್ಫೋಟಿಸಿಕೊಂಡ ಪರಿಣಾಮ ೧೫ ಜನ ಮೃತಪಟ್ಟು ೭೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ತೆಹರಿಕ್-ಎ-ತಾಲಿಬಾನ್ ಪಾಕಿಸ್ತಾನ ಮತ್ತು ಜಮಾತ್-ಉಲ್-ಅಹ್ರಾರ್ ಬಣಗಳು ಈ ಕೃತ್ಯಕ್ಕೆ ಹೊಣೆ ಹೊತ್ತಿದ್ದವು.
ಶಸ್ತ್ರಾಸ್ತ್ರಗಳು, ಸ್ಫೋಟಕ ಸಾಮಗ್ರಿಗಳು ಮತ್ತು ಡೆಟನೋಟರ್ ಗಳನ್ನು ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಸಂಘಟನೆಗಳೊಂದಿಗೆ ಈ ಬಂಧಿತ ಭಯೋತ್ಪಾದಕರು ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.