ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ಚೊಚ್ಚಲ ಬ್ರಿಟನ್ ಪ್ರವಾಸ ಗುರುವಾರ ಆರಂಭವಾಗಿದೆ. ಒಂದೆಡೆ ಅದ್ಧೂರಿ ಸ್ವಾಗತ, ಮತ್ತೊಂದೆಡೆ ಪ್ರತಿಭಟನೆಯ ಬಿಸಿ ಮೋದಿ ಅವರನ್ನು ತಟ್ಟಿದೆ. ಬ್ರಿಟನ್ ತಲುಪಿದ ಪ್ರಧಾನಿ ಮೋದಿ ಅವರನ್ನು 10 ಡೌನಿಂಗ್ ಸ್ಟ್ರೀಟ್ ಬಳಿ ಸೇನಾ ಗೌರವಗಳ ಮೂಲಕ ಸ್ವಾಗತಿಸಲಾಯಿತು. ಇದಾದ ಕೆಲವೇ ಕ್ಷಣಗಳಲ್ಲಿ ಮೋದಿ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ರೊಂದಿಗೆ 90 ನಿಮಿಷಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಉಭಯ ನಾಯಕರಿಂದ ಜಂಟಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಕೆಮರೂನ್, 'ಭಾರತ-ಬ್ರಿಟನ್ ಸಮಾನ ಮೌಲ್ಯಗಳನ್ನು ಹೊಂದಿವೆ. ನಮ್ಮ ಕಂಪನಿಗಳು ನಿಜವಾಗಲೂ ಮೇಕ್ ಇನ್ ಇಂಡಿಯಾಗೆ ಮನಸ್ಸು ಮಾಡಬೇಕು'' ಎಂದರು.