ಇಸ್ಲಾಮಾಬಾದ್: ಲಾಹೋರ್ ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಷ ಮಾಡಿದ್ದಕ್ಕಾಗಿ ಪಾಕಿಸ್ತಾನಿ ಪೈಲಟ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶಹೀನ್ ಏರ್ ಫ್ಲೈಟ್ ನ ಪೈಲಟ್ ನ.3 ರಂದು ವಿಮಾನವನ್ನು ಲಾಹೋರ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರು. ತುರ್ತು ಭೂಸ್ಪರ್ಷದ ಪರಿಣಾಮ 10 ಜನ ಪ್ರಯಾಣಿಕರಿಗೆ ಗಾಯಗಳಾಗಿತ್ತು. ಶಹೀನ್ ಏರ್ ಫ್ಲೈಟ್ ನ ಪೈಲಟ್ ದಣಿದಿದ್ದೂ ಅಲ್ಲದೇ ಮದ್ಯಪಾನ ಮಾಡಿದ್ದರಿಂದ ಮತ್ತಷ್ಟು ಹೆಚ್ಚಿನ ಹಾನಿಯುಂಟಾಗುವ ಸಾಧ್ಯತೆ ಇತ್ತು ಎಂದು ನಾಗರಿಕ ವಿಮಾನ ಪ್ರಾಧಿಕಾರದ ಮಹಾನಿರ್ದೇಶಕರು ತಿಳಿಸಿದ್ದಾರೆ.
ಈ ಬಗ್ಗೆ ಸಂಪಾದಕೀಯ ಬರೆದಿರುವ ಪಾಕಿಸ್ತಾನದ ಪತ್ರಿಕೆ ದಿ ನೇಷನ್, ಕಳೆದ ಕೆಲ ವರ್ಷಗಳಲ್ಲಿ ಖಾಸಗಿ ಸಂಸ್ಥೆಗಳ ವಿಮಾನಗಳು ಅಪಘಾತಕ್ಕೀಡಾಗಿದ್ದು ಪ್ರಯಾಣಿಕರ ಭದ್ರತೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದೆ. ಈ ಹಿಂದೆ ಪಾಕಿಸ್ತಾನ್ ಅಂತಾರಾಷ್ಟ್ರೀಯ ಏರ್ ಲೈನ್ಸ್ ನ ಪೈಲಟ್ ಕಡ್ಡಾಯ ವಿಶ್ರಾ೦ತಿಯನ್ನೂ ಪಡೆಯದೇ ಟ್ರಾನ್ಸ್-ಅಟ್ಲಾಂಟಿಕ್ ದೀರ್ಘ-ಪ್ರಯಾಣದ ವಿಮಾನ ಚಾಲನೆ ಮಾಡಿ ಗಂಭೀರ ವಾಯು ಸುರಕ್ಷತಾ ಅಪಾಯ ಎದುರಾಗುವಂತೆ ಮಾಡಿದ್ದರು. ಇಂತಹ ಪ್ರಕರಣಗಳ ಬಗ್ಗೆ ವಿಮಾನಯಾನ ಪ್ರಾಧಿಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಪತ್ರಿಕೆ ಎಚ್ಚರಿಕೆ ನೀಡಿದೆ.