ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವಣ ಸೂಕ್ಷ್ಮ ವಿಷಯವಾದ ಕಾಶ್ಮೀರ ವಿವಾದವನ್ನು ಬಗೆಹರಿಸಲು ಮತ್ತು ದಕ್ಷಿಣ ಏಷ್ಯಾದಲ್ಲಿ ಆಯಕಟ್ಟಿನ ಸ್ಥಿರತೆ ಕಾಪಾಡಲು ಪ್ರಮುಖ ಪಾತ್ರ ವಹಿಸಬೇಕೆಂದು ಪಾಕಿಸ್ತಾನ ಅಮೆರಿಕವನ್ನು ಕೋರಿದೆ.
ಕಾಶ್ಮೀರ ವಿವಾದವನ್ನು ಬಗೆಹರಿಸಲು ಶ್ರಮಿಸುವುದು ಅಮೆರಿಕ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಕರ್ತವ್ಯವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಐಸಸ್ ಅಹ್ಮದ್ ಚೌಧರಿ ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಇಂದು ರಾತ್ರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದು, ಈ ಸಂದರ್ಭದಲ್ಲಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಸಮಸ್ಯೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತ ಸೇರಿದಂತೆ ಎಲ್ಲಾ ನೆರೆ ದೇಶಗಳೊಂದಿಗೆ ಶಾಂತಿ, ಸೌಹಾರ್ದತೆ ಕಾಪಾಡಲು ಪಾಕಿಸ್ತಾನ ಬಯಸುತ್ತದೆ. ಅದಕ್ಕಾಗಿಯೇ ಕಳೆದ ವರ್ಷ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಮ್ಮ ಪ್ರಧಾನಮಂತ್ರಿ ಶರೀಫ್ ಅವರು ಹೋಗಿದ್ದರು. ಆದರೆ ಭಾರತದ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಯಿಲ್ಲ ಎಂದು ಅಹ್ಮದ್ ಚೌಧರಿ ಹೇಳಿರುವುದಾಗಿ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಪಾಕ್ ಪ್ರಧಾನಿ ನವಾಜ್ ಷರೀಫ್ ಅಮೆರಿಕಕ್ಕೆ ಇಂದು ರಾತ್ರಿ ಪ್ರಯಾಣ ಬೆಳಸಲಿದ್ದು, ಇನ್ನು ಮೂರು ದಿನಗಳ ಕಾಲ ಅಲ್ಲಿ ತಂಗಲಿದ್ದಾರೆ. ನಾಡಿದ್ದು ಗುರುವಾರ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.