ವಾಷಿಂಗ್ಟನ್: ಭಯೋತ್ಪಾದನೆ ನಿಗ್ರಹದ ಅಮೆರಿಕಾ ಕಾಂಗ್ರೆಸ್ ನ ಉಪಸಮಿತಿ ಸದಸ್ಯ ಪಾಕಿಸ್ತಾನ ಪದೇ ಪದೇ ತನ್ನ ಕಪಟತೆಯನ್ನು ನಿರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕಾಗೆ ಭೇಟಿ ನೀಡಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಯಾವುದೇ ರೀತಿಯ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿಹಾಕಬಾರದೆಂದು ಉಪಸಮಿತಿ ಸದಸ್ಯ ಹಾಗೂ ಸಂಸದ ಟೆಡ್ ಪೋ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದಿದ್ದಾರೆ.
ತಾನು ಕಪಟಿ ಎಂಬುದನ್ನು ಪಾಕಿಸ್ತಾನ ಪದೇ ಪದೇ ನಿರೂಪಿಸುತ್ತಿದೆ. ಪಾಕಿಸ್ತಾನದ ಇತಿಹಾಸವನ್ನು ಗಮನಿಸಿದರೆ ಅಮೆರಿಕಾದೊಂದಿಗೆ ನಾಗರಿಕ ಪರಮಾಣು ಸಹಕಾರ ವಿಷಯದಲ್ಲಿ ಪರಿಗಣನೆಗೆ ಅನರ್ಹವಾಗಲಿದೆ. ಆದ್ದರಿಂದ ಪಾಕಿಸ್ತಾನ ಪ್ರಧಾನಿಯೊಂದಿಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವುದು ಬೇಡ ಎಂದು ಭಯೋತ್ಪಾದನೆ ನಿಗ್ರಹ ಉಪಸಮಿತಿ ಸದಸ್ಯ ಅಮೆರಿಕ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದಾರೆ.
ಅಮೆರಿಕಾ ಪಡೆಗಳ ಮೇಲೆ ದಾಳಿ ನಡೆಸಿದ ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡಿದೆ. ಇರಾನ್ ನೊಂದಿಗೆ ಪರಮಾಣು ಒಪ್ಪಂದಗಳ ಬಗ್ಗೆ ಪಾಕಿಸ್ತಾನ ದೋಷ ಮುಕ್ತವಾಗಬೇಕಿದೆ ಎಂದು ಟೆಡ್ ಪೋ ಹೇಳಿದ್ದಾರೆ.