ಲಂಡನ್: ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ರಾಣಿಪಟ್ಟ ಅಲಂಕರಿಸಿದ ಖ್ಯಾತಿಗೆ ರಾಣಿ 2ನೇ ಎಲಿಜಬೆತ್ ಬುಧವಾರ ಪಾತ್ರವಾಗಲಿದ್ದಾರೆ.
2ನೇ ಎಲಿಜಬೆತ್ ಅವರ ಕೋಲಜ್ಜಿ ವಿಕ್ಟೋರಿಯ ರಾಣಿ 63 ವರ್ಷ 7 ತಿಂಗಳು ಪಟ್ಟದಲ್ಲಿ ಆಸೀನರಾಗಿದ್ದು ಇದುವರೆಗಿನ ದಾಖಲೆಯಾಗಿತ್ತು. ಅದು ಒಂದು ಶತಮಾನದ ಹಿಂದೆ! ಆ ದಾಖಲೆಯನ್ನು 2ನೇ ಎಲಿಜಬೆತ್ ಮುರಿದು ಮುನ್ನುಗ್ಗಲಿದ್ದಾರೆ. ಬ್ರಿಟನ್ ಇತಿ ಹಾಸದಲ್ಲಿ ಇದುವರೆಗೆ ಕೇವಲ 4 ರಾಜ/ ರಾಣಿಯರು ಮಾತ್ರ 50ಕ್ಕಿಂತ ಹೆಚ್ಚು ವರ್ಷ ಸಿಂಹಾಸನದಲ್ಲಿ ಕುಳಿತಿದ್ದಾರಷ್ಟೇ.
25ನೇ ವಯಸ್ಸಿನಲ್ಲಿ ರಾಣಿ ಸ್ಥಾನಕ್ಕೇರಿದ 2ನೇ ಎಲಿಜಬೆತ್ ಜರ್ಮನಿಯೊಂದಿಗಿನ ಯುದ್ಧದಿಂದ ಹಿಡಿದು ಡಯಾನಾ ಸಾವು, ಲಂಡನ್ ಮೇಲಿನ ಉಗ್ರರ ದಾಳಿ ತನಕ ಎಲ್ಲ ವನ್ನೂ ಅಧಿಕಾರದಲ್ಲಿದ್ದೇ ಕಂಡವರು. ಈಗ ಅವರಿಗೆ ಬರೋಬ್ಬರಿ 89 ವರ್ಷ. ಈವರೆಗೂ ಅವರು ರಾಣಿಪಟ್ಟದಲ್ಲಿದ್ದು ವಿನ್‍ಸ್ಟನ್ ಚರ್ಚಿಲ್‍ರಿಂದ ಡೇವಿಡ್ ಕ್ಯಾಮರೂನ್ ತನಕ 12 ಪ್ರಧಾನಿಗಳನ್ನು ಕಂಡಿದ್ದಾರೆ. ವಿಶೇಷವೆಂದರೆ ಈ ರಾಣಿಯ ಪಟ್ಟಾಭಿಷೇಕವಾದಾಗ ಕ್ಯಾಮರೂನ್ ಇನ್ನೂ ಹುಟ್ಟಿಯೇ ಇರಲಿಲ್ಲ! ಅವರು ಕಾಮನ್‍ವೆಲ್ತ್ ಮುಖ್ಯಸ್ಥರಾಗಿಯೂ, ಬ್ರಿಟನ್ ಚರ್ಚ್‍ನ ಸುಪ್ರೀಂ ಗವರ್ನರ್ ಆಗಿಯೂ ಮುಂದುವರೆದಿದ್ದಾರೆ.