ಮೀನಾ(ಸೌದಿ ಅರೇಬಿಯಾ): ಬಕ್ರೀದ್ ಹಬ್ಬದ ಸಂಭ್ರಮದಲ್ಲಿದ್ದ ಸೌದಿ ಅರೇಬಿಯಾಗೆ ಒಂದೇ ತಿಂಗಳಲ್ಲಿ ಎರಡನೇ ಆಘಾತ. ವಾರ್ಷಿಕ ಹಜ್ ಯಾತ್ರೆಯ ಕೊನೆಯ ದಿನವಾದ ಗುರುವಾರ ನಡೆದ ದುರಂತದಲ್ಲಿ 14 ಮಂದಿ ಭಾರತೀಯರು ಸೇರಿ ಕನಿಷ್ಠ 717 ಮಂದಿ ಬಲಿಯಾಗಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸತ್ತವರಲ್ಲಿ ಹದಿನಾಲ್ಕು ಮಂದಿ ಭಾರತೀಯರು. ಇವರಲ್ಲಿ ಒಬ್ಬರು ತೆಲಂಗಾಣದ ಮಹಿಳೆ ಎಂದು ಗುರುತಿಸಲಾಗಿದೆ. ಗುಜರಾತ್ ನ ಒಂಬತ್ತು, ಜಾರ್ಖಂಡ್ ನ ಇಬ್ಬರು ತಮಿಳುನಾಡಿನ ಓರ್ವ ಸೇರಿ ಒಟ್ಟು ಹದಿನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇನ್ನು 13 ಮಂದಿಗೆ ಗಂಭೀರ ಗಾಯಗಳಾಗಿವೆ.
ಮೆಕ್ಕಾದ ಪ್ರಮುಖ ಮಸೀದಿಯಿಂದ ಸುಮಾರು 7 ಕಿ.ಮೀ. ದೂರವಿರುವ ಮೀನಾದಲ್ಲಿ ಗುರುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಹಜ್ ಯಾತ್ರೆಯ ಅಂತಿಮ ಆಚರಣೆಯಾದ ಸೈತಾನನಿಗೆ ಕಲ್ಲು ಹೊಡೆಯುವ ಪ್ರಕ್ರಿಯೇ ವೇಳೆ ನೂಕುನುಗ್ಗಲು ನಡೆದಿದೆ. ಲಕ್ಷಾಂತರ ಮಂದಿ ಒಂದೇ ಸ್ಥಳದಲ್ಲಿ ಏಕಕಾಲಕ್ಕೆ ಈ ಆಚರಣೆಗೆ ತೊಡಗಿದ್ದಾಗ ಕಾಲ್ತುಳಿತ ಉಂಟಾಗಿದ್ದೇ ಅವಘಡಕ್ಕೆ ಕಾರಣ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಹಜ್‍ನ ಇತಿಹಾಸದಲ್ಲೇ ನಡೆದ ಎರಡನೇ ಅತಿ ಭೀಕರ ದುರಂತವಾಗಿದೆ. 1990ರಲ್ಲಿ ನಡೆದ ಕಾಲ್ತುಳಿತಕ್ಕೆ 1,426 ಮಂದಿ ಮೃತಪಟ್ಟಿದ್ದರು. ಇದೇ ತಿಂಗಳ ಆರಂಭದಲ್ಲಿ ಬೃಹತ್ ಕ್ರೇನ್ ವೊಂದು ಮೆಕ್ಕಾ ಮಸೀದಿ ಮೇಲೆ ಕುಸಿದು ಬಿದ್ದು 107 ಮಂದಿ ಸಾವಿಗೀಡಾಗಿದ್ದರು. ಇದರ ನೆನಪು ಮಾಸುವ ಮೊದಲೇ ಈಗ ಮತ್ತೊಂದು ಭೀಕರ ದುರಂತ ನಡೆದಿದೆ. ಅವಘಡದಲ್ಲಿ ಅಸ್ಸಾಂನ ಇಬ್ಬರು ಗಾಯಗೊಂಡಿರುವ ವರದಿ ಸಿಕ್ಕಿದೆ ಎಂದು ಜೆಡ್ಡಾದ ಲ್ಲಿರುವ ಭಾರತೀಯ ಕಾನ್ಸುಲೇಟ್ ತಿಳಿಸಿದೆ.
ಕಾಲ್ತುಳಿತ ಉಂಟಾಗಿದ್ದು ಹೇಗೆ? ಜಮಾರತ್‍ಗೆ ತೆರಳುವ 5 ಹಾದಿಗಳಲ್ಲಿ 2 ಹಾದಿಗಳನ್ನು ಮುಚ್ಚಲಾಗಿತ್ತು. ದಿಢೀರನೆ ಇಲ್ಲಿ ಯಾತ್ರಿಗಳ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತ ಉಂಟಾಯಿತು ಎಂದು ಇರಾನ್ ಆರೋಪಿಸಿದೆ. ಆದರೆ, ಬಸ್ ವ್ಯವಸ್ಥೆಯಿದ್ದರೂ ನಡೆದೇ ಸಾಗುತ್ತೇವೆಂದು ಯಾತ್ರಿಗಳು ಪಟ್ಟು ಹಿಡಿದು ನಡೆಯಲು ಆರಂಭಿಸಿದಾಗ ನೂಕುನುಗ್ಗಲು ಸಂಭವಿಸಿತು. ಸರ್ಕಾರದ ಸೂಚನೆ ಪಾಲಿಸದೇ ತಮ್ಮಿಷ್ಟದಂತೆ ಯಾತ್ರಿಗಳು ಚಲಿಸಲು ಶುರು ಮಾಡಿದ್ದೇ ದುರಂತಕ್ಕೆ ಕಾರಣವೆಂದು ಸೌದಿ ಆರೋಗ್ಯ ಸಚಿವ ಹೇಳಿದ್ದಾರೆ.
ದುರಂತಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರು ಗುರುವಾರ ಟ್ವೀಟ್ ಮಾಡಿದ್ದು, 'ಮೆಕ್ಕಾದಿಂದ ಆಘಾ ತಕಾರಿ ಸುದ್ದಿ ಕೇಳಿ ನೋವಾಯಿತು. ಕಾಲ್ತುಳಿತದಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳ ಬಯಸುತ್ತೇನೆ. ಗಾಯಾಳುಗಳು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತೇನೆ'' ಎಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರೂ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೀನಾದಲ್ಲಿರುವ ಭಾರತೀಯರೆಲ್ಲರೂ ಸುರಕ್ಷಿತವಾಗಿರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.