ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ನ್ಯೂಯಾರ್ಕ್ ನಲ್ಲಿ ಭೇಟಿ ಮಾಡಲಿದ್ದು ಈ ವರ್ಷದಲ್ಲಿ ಉಭಯ ನಾಯಕರು 3 ನೇ ಬಾರಿಗೆ ಭೇಟಿ ಮಾಡುತ್ತಿದ್ದಾರೆ.
ಒಬಾಮ ಅವರೊಂದಿಗಿನ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಹವಾಮಾನ ಬದಲಾವಣೆ, ದ್ವಿಪಕ್ಷೀಯ ಆರ್ಥಿಕ ಮತ್ತು ರಕ್ಷಣಾ ಸಂಬಂಧಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮೋದಿ- ಬರಾಕ್ ಒಬಾಮ ಅವರ ಭೇಟಿಗೂ ಮುನ್ನ ಸುಷ್ಮಾ ಸ್ವರಾಜ್- ಯುಎಸ್ ಕಾರ್ಯದರ್ಶಿ ಜಾನ್ ಕೆರ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಚೀನಾ ಅಧ್ಯಕ್ಷರು ವೈಟ್ ಹೌಸ್ ಗೆ ಭೇಟಿ ನೀಡಿ ಅಮೆರಿಕ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಪ್ರಧಾನಿ ಮೋದಿ- ಒಬಾಮ ಭೇಟಿ ಮಹತ್ವ ಪಡೆದುಕೊಂಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸಕ್ರಿಯವಾಗಿರುವ ಬಗ್ಗೆ ಅಮೆರಿಕ ಆಕ್ಷೇಪ ವ್ಯಕ್ತವಿರುವ ಹಿನ್ನೆಲೆಯಲ್ಲಿ ಅಮೆರಿಕಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸಲು ಚೀನಾ ಯತ್ನಿಸುತ್ತಿದೆ. ಮೋದಿ- ಬರಾಕ್ ಒಬಾಮ ಭೇಟಿ ವೇಳೆ ರಕ್ಷಣಾ ಸಂಬಂಧಗಳ ವಿಷಯ ಮಹತ್ವದ ಅಜೆಂಡಾ ಆಗಿದೆ.