ಬೀಜಿಂಗ್: ವಿದೇಶಿ ಎನ್ ಜಿಒ ಗಳಿಗೆ ಕಡಿವಾಹಣ ಹಾಕಲು ಚೀನಾ ಕಾನೂನನ್ನು ರೂಪಿಸಿದೆ. ವಿದೇಶಿ ಎನ್ ಜಿಒ ಗಳು ಚೀನಾದ ಆಂತರಿಕ ವಿಚಾರಗಳಲ್ಲಿ ಅಡ್ಡಿ ಉಂಟು ಮಾಡುತ್ತಿರುವುದರಿಂದ ಅವುಗಳನ್ನು ನಿಯಂತ್ರಿಸಲು ಚೀನಾ ಸರ್ಕಾರ ಈ ಕ್ರಮ ಕೈಗೊಂಡಿದೆ.
ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್(ಎನ್ ಪಿಸಿ) ಫಾರಿನ್ ಎನ್ ಜಿಒ ಮ್ಯಾನೇಜ್ ಮೆಂಟ್ ಕಾನೂನನ್ನು ಅಂಗೀಕರಿಸಿದ್ದು 2017 ರ ಜನವರಿಯಿಂದ ಈ ಕಾನೂನು ಜಾರಿಗೊಳ್ಳಲಿದೆ. ಸಂಸತ್ ಅಧಿವೇಶನ ಇಲ್ಲದೇ ಇದ್ದ ಸಂದರ್ಭದಲ್ಲಿ ಎನ್ ಪಿಸಿ ಸ್ಥಾಯಿ ಸಮಿತಿಗೆ ಕಾನೂನುಗಳನ್ನು ಅಂಗೀಕರಿಸುವ ಅಧಿಕಾರವಿದ್ದು, ಎನ್ ಜಿಒ ಮ್ಯಾನೇಜ್ ಮೆಂಟ್ ಕಾನೂನನ್ನು ಎನ್ ಪಿಸಿ ಅಂಗೀಕರಿಸಿದೆ.
ಹೊಸ ಕಾನೂನಿನ ಪ್ರಕಾರ 2017 ರ ಜನವರಿಯಿಂದ ಚೀನಾದಲ್ಲಿ ವಿದೇಶಿ ಎನ್ ಜಿ ಒ ಗಳು ಚೀನಾದಲ್ಲಿ ದೇಣಿಗೆ ಪಡೆಯುವುದನ್ನು ನಿಯಂತ್ರಿಸಲಿದ್ದು, ಚೀನಾದ ಭದ್ರತಾ ಸಂಸ್ಥೆಗಳೊಂದಿಗೆ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಿದೆ. ಕಾನೂನನ್ನು ಪಾಲಿಸದ ಅಥವಾ ಉಲ್ಲಂಘಿಸುವ ಎನ್ ಜಿ ಒ ಗಳ ಕಾರ್ಯನಿರ್ವಹಣೆಯನ್ನು ರದ್ದುಗೊಳಿಸಬಹುದಾಗಿದೆ.