ಪಾರ್ಲಿಮೆಂಟ್ ಮಂದಿರವನ್ನು ಮುತ್ತಿಗೆ ಹಾಕಿದ ಸದರ್ ಅನುಯಾಯಿಗಳು (ಕೃಪೆ: ರಾಯಿಟರ್ಸ್ )
ಬಾಗ್ದಾದ್: ಇರಾಕ್ ಮತ್ತು ಅಮೆರಿಕ ಸರ್ಕಾರದ ನಿಲುವುಗಳ ಕಡು ವಿರೋಧಿಯಾದ ಶಿಯಾ ಪುರೋಹಿತ ಮಖ್ತದ ಅಲ್ ಸದರ್‌ನ ಬೆಂಬಲಿಗರು ಪಾರ್ಲಿಮೆಂಟ್ ಮಂದಿರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗ್ದಾದ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಬಿಗಿ ಭದ್ರತೆಯಿರುವ ಅಧಿಕಾರಿ ಕಚೇರಿಯಾದ ಗ್ರೀನ್ ಜೋನ್‌ಗೆ ಪ್ರವೇಶಿಸಿದ ಅಲ್ ಸದರ್‌ನ ಸಾವಿರಾರು ಬೆಂಬಲಿಗರು ಪಾರ್ಲಿಮೆಂಟ್ ಮಂದಿರದ ಒಳ ಹೊಕ್ಕು ಅಲ್ಲಿ ಘೋಷಣೆ ಕೂಗಿದ್ದಾರೆ. ಇದೀಗ ಪ್ರಸ್ತುತ ನಗರವನ್ನೇ ಪೊಲೀಸರು ಸುತ್ತುವರಿದಿದ್ದು, ಬಿಗಿ ಭದ್ರತೆಯನ್ನೇರ್ಪಡಿಸಲಾಗಿದೆ.
ಬೆಂಬಲಿಗರ ನಡುವಿನ ತಿಕ್ಕಾಟದಲ್ಲಿ ಪಾರ್ಲಿಮೆಂಟ್‌ನೊಳಗಿದ್ದ ಕುರ್ಚಿ ಮತ್ತು ಇನ್ನಿತರ ವಸ್ತುಗಳಿಗೆ ಹಾನಿಯಾಗಿದೆ.
ಈ ಹಿಂದೆ ಅಮೆರಿಕ ಸೈನ್ಯದ ಆಸ್ಥಾನವಾಗಿದ್ದ 10 ಚದರ ಕಿಮೀ ವಿಸ್ತೀರ್ಣದ ಗ್ರೀನ್‌ಜೋನ್ ನಲ್ಲಿ ವಿದೇಶಗಳ ರಾಯಭಾರಿ ಕಚೇರಿಗಳನ್ನೂ ಮುಚ್ಚಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಸದರ್‌ನ ಬೆಂಬಲಿಗರು ಇರಾಕ್‌ನ ರಾಷ್ಟ್ರಧ್ವಜವನ್ನು ಬೀಸುತ್ತಾ ಪಾರ್ಲಿಮೆಂಟ್ ಮಂದಿರದೊಳಗೆ ನುಗ್ಗಿದ್ದರು. ಆದಾಗ್ಯೂ, ಬೆಂಬಲಿಗರು ಮತ್ತು ಸೇನೆಯ ನಡುವೆ ಸಂಘರ್ಷ ನಡೆದಿರುವ ಬಗ್ಗೆ ಯಾವುದೇ ಮಾಹಿತಿಗಳು ವರದಿಯಾಗಿಲ್ಲ.
ಪ್ರಧಾನಿ ಹೈದರ್ ಅಲ್ ಅಬಾದಿ ಅವರು ಸಚಿವ ಸಂಪುಟದಲ್ಲಿ ಮಾರ್ಪಾಡು ಮಾಡಲು ತಯಾರಿ ನಡೆಸಿದ್ದೇ ಇಲ್ಲಿನ ರಾಜಕೀಯ ಭಿನ್ನತೆಗಳಿಗೆ ಕಾರಣವಾಯಿತು. ಸಚಿವ ಸಂಪುಟದಿಂದ ಕೆಲವು ಸಚಿವರನ್ನು ಬದಲಿಸಲು ಶನಿವಾರ ಸಭೆ ಸೇರಿದ್ದರೂ, ಅಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದ್ದರಿಂದ ಸಭೆ ನಡೆಯಲಿಲ್ಲ. ಇದರ ಬೆನ್ನಲ್ಲೇ ಪ್ರತಿಭಟನಾಕಾರರು ಪಾರ್ಲಿಮೆಂಟ್ ಮಂದಿರಕ್ಕೆ ಮುತ್ತಿಗೆ ಹಾಕಿದ್ದರು.
1014ರಲ್ಲಿ ಐಎಸ್ ಬಾಗ್ದಾದ್‌ನ್ನು ಅತಿಕ್ರಮಿಸಿದಾಗ ರಾಜಧಾನಿ ನಗರದಲ್ಲಿ ಪ್ರತಿಭಟನೆ ಮಾಡಿದ್ದು ಇದೇ ಸದರ್ ನೇತೃತ್ವದ ಶಿಯಾ ಸೇನೆಯಾಗಿತ್ತು. ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇರುವುದು ಮತ್ತು ಈಗಾಗಲೇ ನೀಡಿರುವ ವಾಗ್ದಾನಗಳನ್ನು ಪಾಲಿಸದೇ ಇರುವುದನ್ನು ಪ್ರತಿಭಟಿಸಿ ಸದರ್ ಬೆಂಬಲಿಗರು ಕಳೆದ ಒಂದು ವಾರದಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಸರ್ಕಾರವನ್ನೇ ಕೆಳಗಿಳಿಸುತ್ತೇವೆ ಎಂದು ಈ ಬೆಂಬಲಿಗರು ಮುನ್ನೆಚ್ಚರಿಕೆ ನೀಡಿದ್ದರು.
ಇದೇ ವೇಳೆ ಶನಿವಾರ ಪೂರ್ವ ಬಾಗ್ದಾದ್‌ನಲ್ಲಿ ಟ್ರಕ್ ಬಾಂಬ್ ಸ್ಫೋಟ ಸಂಭವಿಸಿ 21 ಶಿಯಾ ಯಾತ್ರಿಕರು ಸಾವಿಗೀಡಾಗಿದ್ದಾರೆ. 38 ಮಂದಿಗೆ ಗಾಯಗಳಾಗಿವೆ. ಈ ಬಾಂಬ್ ಸ್ಫೋಟದ ಹೊಣೆಯನ್ನು ಐಎಸ್ ಉಗ್ರರು ಹೊತ್ತುಕೊಂಡಿದ್ದಾರೆ.
ಸರ್ಕಾರ ವಿರುದ್ಧದ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಇರಾಕ್ ಪ್ರಧಾನಿ ಪಲಾಯನ ಮಾಡಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಪ್ರಧಾನಿ ಗ್ರೀನ್ ಜೋನ್‌ನಲ್ಲಿ ಸೈನಿಕರೊಂದಿಗೆ ಸಂವಹನ ಮಾಡುತ್ತಿರುವ ದೃಶ್ಯಗಳು 'ಪಲಾಯನ' ಸುದ್ದಿ ಸತ್ಯಕ್ಕೆ ದೂರ ಎಂಬುದನ್ನು ಸಾಬೀತು ಪಡಿಸಿವೆ.
ವಿವಿಧ ಪಕ್ಷಗಳ ಸಚಿವರನ್ನು ನೇಮಕ ಮಾಡುವ ಬದಲು ತಜ್ಞರನ್ನು ನೇಮಕ ಮಾಡಲು ಅಬಾದಿ ತೀರ್ಮಾನಿಸಿರುವುದೇ ವಿವಾದಕ್ಕೆ ಕಾರಣವಾಗಿತ್ತು.