ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಪಡೆಯ ಮುಖ್ಯಸ್ಥ ಸೈಯದ್ ಸಲಹುದ್ದೀನ್
ಕರಾಚಿ: ಪಾಕಿಸ್ತಾನ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದೆ. ಕಾಶ್ಮೀರ ವಿವಾದದಲ್ಲಿ ಭಾರತದ ವಿರುದ್ಧ ಯುದ್ಧ ಸಾಗಿಸುವಂತೆ ಬೆದರಿಕೆ ಹಾಕಲು ಪಾಕಿಸ್ತಾನ ಸರ್ಕಾರ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಪಡೆಯ ಮುಖ್ಯಸ್ಥ ಸೈಯದ್ ಸಲಹುದ್ದೀನ್ ಗೆ ಪ್ರೋತ್ಸಾಹ ನೀಡಿದೆ. ಅದರಂತೆ ಸಲಹುದ್ದೀನ್ ಭಾರತದ ಮೇಲೆ ಪರಮಾಣು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.
ಕರಾಚಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಸಲಹುದ್ದೀನ್, ಕಾಶ್ಮೀರ ವಿವಾದದಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ಮತ್ತು ಭಾರತ ಮಧ್ಯೆ ನಾಗರಿಕ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದರು.
ಕಾಶ್ಮೀರ ಪ್ರಾಂತ್ಯದ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟಂತೆ ತಳಮಟ್ಟದಿಂದ ಹೆಚ್ಚಿನ ಬೆಂಬಲ ನೀಡಲು ಪಾಕಿಸ್ತಾನ ರಾಜಕೀಯವಾಗಿ, ಸಾಂವಿಧಾನಕವಾಗಿ ಮತ್ತು ನೈತಿಕವಾಗಿ ಕರ್ತವ್ಯಬದ್ಧವಾಗಿದೆ.ಪಾಕಿಸ್ತಾನ ಸರ್ಕಾರ ನಮಗೆ ಬೆಂಬಲ ನೀಡಿದರೆ, ಎರಡು ದೇಶಗಳ ಮಧ್ಯೆ ಪರಮಾಣು ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾನೆ.
ಕಾಶ್ಮೀರ ವಿವಾದಕ್ಕೆ ಸಂಬಂಧಪಟ್ಟಂತೆ ಎರಡು ದೇಶಗಳ ಮಧ್ಯೆ ಈಗಾಗಲೇ 3 ಸಲ ಯುದ್ಧ ನಡೆದಿದೆ. 4ನೇ ಸಲ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ, ಏಕೆಂದರೆ ಅಲ್ಲಿನ ಜನ ಪರಿಸ್ಛಿತಿ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನ ಅಥವಾ ವಿಶ್ವವೇ ಅವರ ಜೊತೆಗಿದೆಯೋ, ಇಲ್ಲವೋ ಗೊತ್ತಿಲ್ಲ, ವಿಶ್ವಸಂಸ್ಥೆ ಬೆಂಬಲಿಸಿತ್ತೋ ಇಲ್ಲವೋ ಗೊತ್ತಿಲ್ಲ, ಕಾಶ್ಮೀರ ಜನರು ತಮ್ಮ ಕೊನೆ ರಕ್ತ ನೆಲಕ್ಕೆ ಬೀಳುವವರೆಗೂ ಹೋರಾಡಲು ಸಿದ್ಧರಿದ್ದಾರೆ ಎಂದು ಸೈಯದ್ ಸಲಹುದ್ದೀನ್ ಹೇಳಿದ್ದಾನೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅಂತಾರಾಷ್ಟ್ರೀಯ ಸಮುದಾಯ ಸ್ಪಂದಿಸದಿದ್ದರೆ ವಿಭಜನೆ ಹೊಂದಿದ ಕಾಶ್ಮೀರ ಕಣಿವೆಯಲ್ಲಿನ ಎರಡೂ ಬದಿಯ ಜನರು ಪರಿಸ್ಥಿತಿಯನ್ನು ತಮ್ಮ ಕೈಗೆತ್ತಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇದೇ ಪರಿಸ್ಥಿತಿ ಕಾಶ್ಮೀರದಲ್ಲಿ ಮುಂದುವರಿದರೆ, ಪಾಕಿಸ್ತಾನ ಪ್ರಯತ್ನ ಫಲ ನೀಡದಿದ್ದರೆ, ಭಾರತ ತನ್ನ ದೌರ್ಜನ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಘಟನೆಯೇ ನಡೆಯಬಹುದು.
ಶಸ್ತ್ರಾಸ್ತ್ರಗಳನ್ನು ಹಿಡಿದು ಯುದ್ಧ ಮಾಡುವುದು ಬಿಟ್ಟರೆ ಕಾಶ್ಮೀರಿ ಜನತೆಗೆ ಬೇರೆ ದಾರಿಯಿಲ್ಲ. ಅವರ ಸ್ವಾತಂತ್ರ್ಯ, ಜೀವ ರಕ್ಷಣೆಗೆ ಯಾವುದೇ ಅಂತಾರಾಷ್ಟ್ರೀಯ ಸಮುದಾಯ, ಸಂಘ-ಸಂಸ್ಥೆಗಳು ಬೆಂಬಲಕ್ಕಿಲ್ಲ. ಮೋದಿ ಸರ್ಕಾರ ಕೂಡ ಸ್ವಾತಂತ್ರ್ಯ ನೀಡಿಲ್ಲ.ಹಾಗಾದರೆ ಕಾಶ್ಮೀರದ ನಿರ್ಗತಿಕ, ರಕ್ತಸಿಕ್ತ ಜನರಿಗೆ ಏನು ಉಳಿದಿದೆ? ಯುದ್ಧ ಮಾಡುವುದೊಂದೇ ಅವರಿಗೆ ಉಳಿದಿರುವ ಏಕೈಕ ದಾರಿ ಎಂದು ಸಲಹುದ್ದೀನ್ ಸುದ್ದಿಗಾರರಿಗೆ ಹೇಳಿದನು.
ಬುರ್ಹಾನ್ ಮುಜಾಫರ್ ವಾನಿಯ ಹತ್ಯೆಯ ನಂತರ ಇಡೀ ರಾಜ್ಯ ಭಾರತಕ್ಕೆ ವಿರುದ್ಧವಾಗಿ ಏಕೆ ನಿಂತಿದೆ. ವಾಸ್ತವವಾಗಿ ಬುರ್ಹಾನ್ ವ್ಯಕ್ತಿಯ ಹೆಸರಲ್ಲ, ತತ್ವ, ಗುರಿ, ಸಮರ್ಪಣೆ ಮತ್ತು ಒಂದು ಭಾವನೆಯ ಹೆಸರು. ಈ ಹೊತ್ತಿನಲ್ಲಿ ಕಾಶ್ಮೀರ ಜನತೆ ಬುರ್ಹಾನ್ ಪರವಾಗಿದ್ದಾರೆ ಎನ್ನುತ್ತಾನೆ ಸಲಹುದ್ದೀನ್.
ಜುಲೈ 8 ರಂದು 22 ವರ್ಷದ ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿಯ ಹತ್ಯೆಯ ನಂತರ ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದ್ದು, ಇನ್ನೂ ತಣ್ಣಗಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics