ಬೀಜಿಂಗ್: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ದೆಹಲಿ ಭೇಟಿಯ ವೇಳೆ ಭಾರತ ಅನಗತ್ಯವಾಗಿ ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಮೂರು ತೂರಿಸುವುದು ಬೇಡ. ಇದು ದ್ವಿಪಕ್ಷೀಯ ಸಂಬಂಧದ ಮೇಲೆ ಮತ್ತೊಂದು ರೀತಿಯ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಚೀನಾ ಸರ್ಕಾರಿ ಮಾಧ್ಯಮ ಮಂಗಳವಾರ ಎಚ್ಚರಿಕೆ ನೀಡಿದೆ.
ಭಾರತ, ವಾಂಗ್ ಭೇಟಿಯ ವೇಳೆ ದಕ್ಷಿಣ ಚೀನಾ ಸಮುದ್ರ ವಿಷಯವಾಗಿ ಅನಾವಶ್ಯಕ ಸಮಸ್ಯೆ ತಲೆದೊರದಂತೆ ಎಚ್ಚರವಹಿಸಬೇಕಿದ್ದು, ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಬೆಲೆ ಕಡಿತ ಸೇರಿದಂತೆ ಚೀನಾದೊಂದಿಗೆ ಆರ್ಥಿಕ ಸಹಕಾರಕ್ಕೆ ಉತ್ತಮ ವಾತಾವರಣ ನಿರ್ಮಿಸಬೇಕು ಮತ್ತು ಭಾರತದಿಂದ ರಫ್ತಾಗುವ ವಸ್ತುಗಳ ಸುಂಕ ಕಡಿಮೆ ಮಾಡುವ ಕುರಿತಂತೆ ಸಹಮತಕ್ಕೆ ಬರುವ ಬಗ್ಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ಸಲಹೆ ನೀಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಅನಗತ್ಯವಾಗಿ ದಕ್ಷಿಣ ಚೀನಾ ಸಮುದ್ರದ ವಿವಾದವನ್ನು ಪ್ರಸ್ತಾಪಿಸುವ ಮೂಲಕ ಗೊಂದಲ ಸೃಷ್ಟಿಸುವುದಿಲ್ಲ. ಇದರಿಂದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಅನಗತ್ಯ ಅಡ್ಡಪರಿಣಾಮಗಳು ಬೀರುವ ಸಾಧ್ಯತೆ ಇದೆ ಎಂದು ಚೀನಾ ಮಾಧ್ಯಮ ಹೇಳಿದೆ.
ಹಲವು ರಾಜಕೀಯ ಬೆಳವಣಿಗೆಗಳಿಂದಾಗಿ ಇತ್ತೀಚಿನ ತಿಂಗಳಲ್ಲಿ ಭಾರತ ಮತ್ತು ಚೀನಾ ನಡುವೆ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಭಾರತ ತನ್ನ ಪ್ರಾದೇಶಿಕ ವಿವಾದಗಳನ್ನು ದಕ್ಷಿಣ ಚೀನಾ ಸಮುದ್ರ ವಿವಾದದೊಂದಿಗೆ ತಳಕು ಹಾಕುವುದು ಬೇಡ. ಇದನ್ನು ಭಾರತ ಪರಿಗಣಿಸಬೇಕು ಎಂದು ಚೀನಾ ಮಾಧ್ಯಮ ಸಲಹೆ ನೀಡಿದೆ.
ಚೀನಾ ವಿದೇಶಾಂಗ ಸಚಿವ ವಾಂಗ್ ಅವರು ಆಗಸ್ಟ್ 13ರಂದು ಭಾರತಕ್ಕೆ ಆಗಮಿಸುತ್ತಿದ್ದು, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರೊಂದಿಗೆ ಎನ್ಎಸ್ ಜಿ ಸೇರಿದಂತೆ ಪ್ರಮುಖ ಪ್ರಾದೇಶಿಕ ಮತ್ತು ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.