ಬಾಗ್ದಾದ್: ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 11 ನವಜಾತ ಶಿಶುಗಳು ಸಾವನ್ನಪ್ಪಿರುವ ದಾರುಣ ಘಟನೆ ಬಾಗ್ದಾದ್ ನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಸಂಭವಿಸಿದ ವಿದ್ಯುತ್ ವೈರಿಂಗ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಯಾರ್ ಮೌಕ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಇರಾಕ್ ಆರೋಗ್ಯ ಇಲಾಖೆಯ ವಕ್ತಾರ ಅಹ್ಮದ್ ಆಲ್ ರೌದಾನಿ ತಿಳಿಸಿದ್ದಾರೆ.
ವಿದ್ಯುತ್ ನಿರ್ವಹಣೆಯಲ್ಲಿ ವ್ಯತ್ಯಾಸವಾದ್ದರಿಂದ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಕೂಡಲೇ ಕಾರ್ಯಾಚರಣೆ ಕೈಗೊಂಡ ಬಾಗ್ದಾದ್ ಆಡಳಿತ ಮಂಡಳಿ, 29 ಮಹಿಳಾ ರೋಗಿಗಳು ಹಾಗೂ 7 ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಸರಿಯಾದ ನಿರ್ವಹಣೆ ಹಾಗೂ ಕಳಪೆ ಗುಣ ಮಟ್ಟದ ವೈರಿಂಗ್ ನಿಂದಾಗಿ ಬಾಗ್ದಾದ್ ನಲ್ಲಿ ಆಗಾಗ್ಗೆ ಅಗ್ನಿ ಅವಘಡಗಳು ಸಂಭವಿಸುವುದು ಸಹಜವಾಗಿದೆ.