ಢಾಕಾ: ಕಳೆದ ತಿಂಗಳು ನಡೆದಿದ್ದ ಢಾಕಾ ಕೆಫೆ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರು ಉಗ್ರನನ್ನು ಭದ್ರತಾ ಪಡೆ ಯೋಧರು ಹೊಡೆದುರುಳಿಸಿದ್ದಾರೆ.
ಢಾಕಾದ ನಾರಾಯಣ್ ಗಂಜ್ ನಲ್ಲಿ ಉಗ್ರರು ತಲೆ ಮರೆಸಿಕೊಂಡಿದ್ದು ಇವರ ಅಡಗುತಾಣವನ್ನು ಪತ್ತೆ ಹಚ್ಚಿದ ಯೋಧರು ಗುಂಡಿನ ದಾಳಿ ನಡೆಸಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಮೃತ ನಾಲ್ವರ ಪೈಕಿ ಓರ್ವ ಢಾಕಾ ಕೆಫೆ ದಾಳಿಯ ಸಂಚುಕೋರ ಬಾಂಗ್ಲಾದೇಶ ಮೂಲದ ಕೆನಡಾ ಪ್ರಜೆ ತಮೀಮ್ ಅಹಮದ್ ಚೌಧರಿ ಎಂದು ಹೇಳಲಾಗುತ್ತಿದೆ.
ಕಳೆದ ಜುಲೈ 1 ರಂದು ನಡೆದಿದ್ದ ಢಾಕಾ ಕೆಫೆ ಬಾಂಬ್ ದಾಳಿಯಲ್ಲಿ 17 ಮಂದಿ ವಿದೇಶೀಯರು ಸೇರಿದಂತೆ 22 ಜನರು ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಉಗ್ರಗಾಮಿ ಸಂಘಟನೆಗೆ ಸೇರಿದ ಐವರು ಉಗ್ರರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.