ಕನೋ: ನೈಜಿರಿಯಾದಲ್ಲಿ ಶುಕ್ರವಾರ ಇಬ್ಬರು ಅತ್ಮಹತ್ಯಾ ದಾಳಿಕೋರರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಬರೊಬ್ಬರಿ 56 ಮಂದಿ ಸಾವಿಗೀಡಾಗಿದ್ದು, 33ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈಶಾನ್ಯ ನೈಜಿರಿಯಾದ ಮಾರುಕಟ್ಟೆಗೆ ಗ್ರಾಹಕರ ಸೋಗಿನಲ್ಲಿ ಆಗಮಿಸಿದ ಮುಸುಕುಧಾರಿ ಮಹಿಳಾ ಆತ್ಮಹತ್ಯಾ ಬಾಂಬರ್ ಗಳು ನೋಡ ನೋಡುತ್ತಿದ್ದಂತೆಯೇ ತಮ್ಮನ್ನು ತಾವು ಸ್ಫೋಟಗೊಳಿಸಿಕೊಂಡಿದ್ದು, ಪರಿಣಾಮ ಸ್ಥಳದಲ್ಲೇ 45 ಮಂದಿ ಸಾವಿಗೀಡಾಗಿದ್ದರು. ಈ ವೇಳೆ ಹಲವರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಇಂದು ಮತ್ತೆ 11 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 56ಕ್ಕೇರಿದೆ. ಅಂತೆಯೇ ಗಾಯಾಳುಗಳ ಸಂಖ್ಯೆ 33ಕ್ಕೇರಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಇಲ್ಲಿಯವರೆಗೂ ಯಾವುದೇ ಉಗ್ರ ಸಂಘಟನೆಯೂ ದಾಳಿ ಹೊಣೆ ಹೊತ್ತಿಲ್ಲವಾದರೂ, ನೈಜಿರಿಯಾದಲ್ಲಿ ಕುಖ್ಯಾತಿ ಪಡೆದಿರುವ ಬೋಕೋ ಹರಾಮ್ ಉಗ್ರ ಸಂಘಟನೆಯೇ ದಾಳಿ ನಡೆಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.