ಬೇರುತ್: 9 ತಿಂಗಳ ಹಿಂದೆ ರಷ್ಯಾ ಸೇನೆಯ ಬೆಂಬಲದೊಂದಿಗೆ ಸಿರಿಯಾ ಸೇನೆ ನಡೆಸಿದ್ದ ಜಂಟಿ ಸೇನಾ ದಾಳಿಯಿಂದ ಪಲ್ಮೆರಾ ಪ್ರದೇಶದಿಂದ ಪಲಾಯನ ಮಾಡಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆ ಇದೀಗ ಮತ್ತೆ ಪಲ್ಮೆರಾ ಪಟ್ಟಣವನ್ನು ಮರುವಶಪಡಿಸಿಕೊಂಡಿದ್ದಾರೆ.
ನಿನ್ನೆ ಸಿರಿಯಾ ನೇತೃತ್ವದ ಜಂಟಿ ಸೇನೆ ಮೇಲೆ ಉಗ್ರರು ಹಠಾತ್ ದಾಳಿ ನಡೆಸಿದ್ದರು. ಉಗ್ರರಿಂದ ಪಲ್ಮೆರಾ ಪಟ್ಟಣ ರಕ್ಷಿಸಿಕೊಳ್ಳಲು ಸೇನೆ ಸಾಕಷ್ಟು ಯತ್ನ ನಡೆಸಿದರು. ಉಗ್ರರು ಪ್ರಬಲ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಅಂತಿಮವಾಗಿ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು.
ಇನ್ನು 2015ರ ಮೇ ತಿಂಗಳಿನಿಂದ 2016ರ ಮಾರ್ಚ್ ವರೆಗೆ ಉಗ್ರರು ಪಲ್ಮೆರಾ ಮೇಲೆ ಹಿಡಿತ ಸಾಧಿಸಿದ್ದರು. ಇದೀಗ ಪಲ್ಮೆರಾ ನಗರವನ್ನು ಸುತ್ತುಮುತ್ತಿರುವ ಉಗ್ರರು ತೈಲ ಬಾವಿಗಳು, ಸರ್ಕಾರಿ ಕಚೇರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಉಗ್ರರ ಹಠಾತ್ ದಾಳಿಯಿಂದಾಗಿ 20 ಸೈನಿಕರು ಮೃತಪಟ್ಟಿದ್ದು, ಇನ್ನು ಹಲವು ಸೈನಿಕರು ಅಲ್ಲಿ ಸಿಕ್ಕಿಹಾಕಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.