ಭಾರತೀಯ ಮೂಲದ ಇಂಜಿನಿಯರ್ ಪ್ರದೀಪ್ ಗುಪ್ತ ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದ ಮೇಯರ್ ಆಗಿ ನೇಮಕಗೊಂಡಿದ್ದಾರೆ.
ಪ್ರದೀಪ್ ಗುಪ್ತಾ ಚೆನ್ನೈ ಐಐಟಿಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದು, ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದ ಮೇಯರ್ ಆಗಿ ನೇಮಕಗೊಂಡಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ಮೂಲಕ ತಿಳಿದುಬಂದಿದೆ. ಈ ಮೂಲಕ ಅಮೆರಿಕದ ಕ್ಯಾಲಿಫೋರ್ನಿಯಾದ ಮೇಯರ್ ಆಗಿರುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾಜಿ ಮೇಯರ್ ಮಾರ್ಕ್ ಅಡ್ಡಿಗೊ ಅವರು ಮಾಡಿದ್ದ ಉತ್ತಮ ಕೆಲಸಗಳನ್ನು ಮುಂದುವರೆಸುವುದು ನನಗೆ ಹೆಮ್ಮೆಯ ವಿಚಾರವಾಗಿದೆ ಎಂದು ಪ್ರದೀಪ್ ಗುಪ್ತಾ ಹೇಳಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ನಗರದ ಅಭಿವೃದ್ಧಿಗೆ ಈ ವರೆಗೂ ಶ್ರಮಿಸಿರುವ ನಾಯಕರು ನಮ್ಮ ಪರಿಷತ್ ನಲ್ಲಿದ್ದಾರೆ. ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋ ನಗರವನ್ನು ಮೇಯರ್ ಆಗಿ ಮುನ್ನಡೆಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
2012 ರ ಡಿಸೆಂಬರ್ ನಲ್ಲಿ ಪ್ರದೀಪ್ ಗುಪ್ತಾ ಅವರು ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋ ಪರಿಷತ್ ಗೆ ಒಂದು ವರ್ಷದ ಅವಧಿಗೆ ಆಯ್ಕೆಯಾಗಿದ್ದರು. ನಂತರ ನವೆಂಬರ್ 2013 ರಲ್ಲಿ ನಾಲ್ಕು ವರ್ಷದ ಅವಧಿಗೆ ಆಯ್ಕೆಗೊಂಡಿದ್ದರು. ಅಷ್ಟೇ ಅಲ್ಲದೇ ಸ್ಯಾನ್ ಫ್ರಾನ್ಸಿಸ್ಕೋ ನಗರದ ಯೋಜನಾ ಆಯೋಗದ ಸದಸ್ಯರಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ್ದರು. ಪ್ರದೀಪ್ ಗುಪ್ತಾ ಅವರು ಪರ್ಡ್ಯೂ ವಿಶ್ವವಿದ್ಯಾಲಯದಿಂದ ಎಲೆಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.