ಕೊಲಂಬೊ: ಎರಡು ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಅವರನ್ನು ಭೇಟಿ ಮಾಡಿದ್ದಾರೆ.
ನೆರೆಯ ರಾಷ್ಟ್ರದಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಭವ್ಯ ಸ್ವಾಗತ ದೊರೆತಿದ್ದು ಸಚಿವರು ಶ್ರೀಲಂಕಾ ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ. ಫೆ.5 ರಂದು ಶ್ರೀಲಂಕಾಗೆ ತಲುಪಿರುವ ಸುಷ್ಮಾ ಸ್ವರಾಜ್ ಅವರನ್ನು ಅಲ್ಲಿನ ವಿದೇಶಾಂಗ ಸಚಿವ ಮಂಗಳ ಸಮರವೀರ ಅವರು ಸ್ವಾಗತಿಸಿದರು.
ಭಾರತ-ಶ್ರೀಲಂಕಾದ ಜಂಟಿ ಆಯೋಗದ 9ನೇ ಅಧಿವೇಶನದಲ್ಲಿ ಭಾಗವಹಿಸಲು ಸುಷ್ಮಾ ಸ್ವರಾಜ್ ಶ್ರೀಲಂಕಾಗೆ ಭೇಟಿ ನೀಡಿದ್ದಾರೆ. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಹಕಾರವನ್ನು ಉತ್ತಮಗೊಳಿಸಲು 1992 ರಲ್ಲಿ ಜಂಟಿ ಆಯೋಗವನ್ನು ರಚಿಸಲಾಗಿತ್ತು. ಸುಷ್ಮಾ ಸ್ವರಾಜ್- ವಿಕ್ರಮ ಸಿಂಘೆ ಅವರ ಭೇಟಿಯಲ್ಲಿ ಭಾರತ- ಶ್ರೀಲಂಕಾ ದ್ವಿಪಕ್ಷೀಯ ಸಂಬಂಧದ ಕುರಿತು ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.