ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ 400 ಕೋಟಿ ಜನರು ಕುಡಿಯುವ ನೀರಿನ ಕ್ಷಾಮ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ನಡೆಸಿದ ಸಮೀಕ್ಷೆಯೊಂದು ಹೇಳಿದೆ. ಇಷ್ಟು ಜನರು ಪ್ರತೀ ವರ್ಷ ಒಂದು ತಿಂಗಳಷ್ಟು ಕಾಲ ಕುಡಿಯುವ ನೀರು ಸಿಗದೆ ಕಷ್ಟಪಡುತ್ತಾರೆ. ಅದೇ ವೇಳೆ 100 ಕೋಟಿಗಳಷ್ಟು ಜನರಿಗೆ ಮಾತ್ರ ವರ್ಷದ ಹನ್ನೆರಡು ತಿಂಗಳು ಮಾತ್ರ ಕುಡಿಯಲು ಶುದ್ಧ ನೀರು ಲಭಿಸುತ್ತಿದೆ.
ನೀರಿನ ದುರ್ಬಳಕೆ ಅತಿಯಾಗುತ್ತಿದ್ದು, ಇದೇ ಜಲಕ್ಷಾಮಕ್ಕೆ ಹೇತುವಾಗಿದೆ ಎಂದು ವಿಶ್ವಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.
ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ಸಮಶೀತೋಷ್ಣ ವಲಯಗಳೇ ಹೆಚ್ಚಿನ ಜಲಕ್ಷಾಮವನ್ನು ಎದುರಿಸುತ್ತಿವೆ. ಈ ಪಟ್ಟಿಯಲ್ಲಿ ಭಾರತ, ಆಫ್ರಿಕಾದ ಕೆಲವು ದೇಶಗಳು ಸೇರಿದಂತೆ ಅತೀ ಹೆಚ್ಚು ಜನಸಂಖ್ಯೆಯಿರುವ ಚೀನಾ, ಜನಸಂಖ್ಯಾ ಅನುಪಾತ ಕಡಿಮೆಯಿರುವ ಆಸ್ಟ್ರೇಲಿಯಾ ಕೂಡಾ ಪಟ್ಟಿಯಲ್ಲಿದೆ.
ಹಳ್ಳಿಗಳಲ್ಲಿ ಮಾತ್ರವಲ್ಲ ಲಂಡನ್ ಸೇರಿದಂತೆ ಹಲವು ಪ್ರಮುಖ ನಗರಗಳೂ ಈ ಪಟ್ಟಿಯಲ್ಲಿ. ಏತನ್ಮಧ್ಯೆ, ಅಮೆರಿಕ ಮತ್ತು ದಕ್ಷಿಣ ಯುರೋಪ್‌ನ ರಾಷ್ಟ್ರಗಳು ಜಲ ಸಂಪತ್ತನ್ನು ಹಿತಮಿತವಾಗಿ ಬಳಸುತ್ತಿವೆ.
ಬರ ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಯೆಮನ್ ಮೊದಲನೇ ಸ್ಥಾನದಲ್ಲಿದೆ. ಭಾರತ 22ನೇ ಸ್ಥಾನದಲ್ಲಿದೆ. ಅದೇ ವೇಳೆ ಶುದ್ಧಜಲ ಕ್ಷಾಮ ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದೆ. ಭಾರತದಲ್ಲಿ ಹಲವಾರು ನದಿಗಳಿದ್ದರೂ ಅವುಗಳನ್ನು ಸರಿಯಾಗಿ ಬಳಸದೇ ಇರುವುದೇ ಭಾರತದಲ್ಲಿ ಜಲಕ್ಷಾಮಕ್ಕೆ ಕಾರಣ ಎಂದು ವಿಶ್ವಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.