ತೈಪೈ(ತೈವಾನ್): ದಕ್ಷಿಣ ಚೀನಾ ಸಮುದ್ರದ ವಿವಾದಿತ ಪ್ಯಾರಸೆಲ್ ದ್ವೀಪದಲ್ಲಿ ಚೀನಾ ದೇಶವು ವಿಮಾನ ನಿರೋಧಕ ಕ್ಷಿಪಣಿಗಳನ್ನು ನಿಯೋಜಿಸಿದೆ ಎಂದು ತೈವಾನ್ ಸರ್ಕಾರ ಮತ್ತು ಅಮೆರಿಕದ ಹಿರಿಯ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾರಸೆಲ್ ದ್ವೀಪ ಗುಂಪಿನ ವುಡಿ ದ್ವೀಪದ ಬಳಿ ಅಸಂಖ್ಯಾತ ಸಂಖ್ಯೆಯ ಕ್ಷಿಪಣಿಗಳನ್ನು ಚೀನಾ ಸರ್ಕಾರ ನಿಯೋಜಿಸಿದೆ ಎಂದು ತೈವಾನ್ ಸರ್ಕಾರದ ರಕ್ಷಣಾ ಸಚಿವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿರುವ ದ್ವೀಪ ವಿವಾದದಲ್ಲಿದ್ದು, ಇದು ತಮಗೆ ಸೇರಿದ್ದೆಂದು ತೈವಾನ್, ವಿಯೆಟ್ನಾಂ, ಚೀನಾ ಮತ್ತು ಅಮೆರಿಕ ದೇಶಗಳು ಪ್ರತಿಪಾದಿಸುತ್ತಾ ಬಂದಿವೆ. ಇಲ್ಲಿ ತನ್ನ ಹೊಸ ದ್ವೀಪವನ್ನು ಸ್ಥಾಪಿಸಿ ನಂತರ ಅಲ್ಲಿ ವಾಯುನೆಲೆ ಮತ್ತು ಮಿಲಿಟರಿ ಸೇನೆಯನ್ನು ಸ್ಥಾಪಿಸುವುದು ಚೀನಾದ ಉದ್ದೇಶವಾಗಿದೆ.
ಚೀನಾ ದೇಶದ ಈ ಮಹತ್ವದ ಯೋಜನೆಯನ್ನು ಮಿಲಿಟರಿ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಗಲಭೆಯಾಗದಂತೆ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಲು ದೇಶದ ಎಲ್ಲಾ ಪಕ್ಷಗಳು ಒಂದಾಗಬೇಕು ಎಂದು ತೈವಾನ್ ನ ರಕ್ಷಣಾ ಸಚಿವಾಲಯ ಮನವಿ ಮಾಡಿದೆ.
ಕ್ಷಿಪಣಿಯು 200 ಕಿಲೋ ಮೀಟರ್ ವಿಸ್ತಾರವನ್ನು ಹೊಂದಿದ್ದು, ಸುತ್ತಮುತ್ತಲ ದೇಶಗಳ ನಾಗರಿಕ ಮತ್ತು ಯುದ್ಧ ವಿಮಾನಗಳಿಗೆ ಅಪಾಯಕಾರಿಯಾಗಿದೆ. ತೈವಾನ್ ಮತ್ತು ಚೀನಾ ಒಟ್ಟು ಸೇರಿ ಪಾರಸೆಲ್ ದ್ವೀಪ ಸರಣಿಯಲ್ಲಿ 3.5 ದಶಲಕ್ಷ ಚದರ ಕಿಲೋಮೀಟರ್ ದಕ್ಷಿಣ ಚೀನಾ ಸಮುದ್ರದ ವಿಸ್ತಾರವನ್ನು ಹೊಂದಿದೆ. ವಿಯೆಟ್ನಾಂ ಮತ್ತು ಫಿಲಿಪೈನ್ಸ್ ಅದಕ್ಕಿಂತಲೂ ಹೆಚ್ಚು ಒಳಗೊಂಡಿದ್ದು, ಬ್ರುನೈ ಮತ್ತು ಮಲೇಷಿಯಾ ಅದಕ್ಕಿಂತ ಕಡಿಮೆ ವಿಸ್ತಾರವನ್ನು ಹೊಂದಿದೆ.