ಢಾಕಾ: ಬಾಂಗ್ಲಾದೇಶದ ಉತ್ತರ ಭಾಗದಲ್ಲಿರುವ ಪಂಚ್‌ಗಢ್ ಜಿಲ್ಲೆಯ ದೇಬೀಗಂಜ್ ಉಪಾಜಿಲಾದಲ್ಲಿರುವ ಸಂತಗೌರ್‌ಹಿಯೋ ದೇವಾಲಯದ ಅರ್ಚಕನನ್ನು ದೇವಾಲಯದ ಅಂಗಳದಲ್ಲೇ ಹತ್ಯೆಗೈದ ಘಟನೆಯ ಜವಾಬ್ದಾರಿಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ. ಜವಾಬ್ದಾರಿ ವಹಿಸಿಕೊಂಡಿರುವ ಬಗ್ಗೆ ಇಸ್ಲಾಮಿಕ್ ಸ್ಟೇಟ್ ಸಾಮಾಜಿಕ ತಾಣದಲ್ಲಿ ಹೇಳಿಕೆ ನೀಡಿತ್ತು.
50ರ ಹರೆಯದ ಜೋಗೇಶ್ವರ್ ರಾಯ್ ಎಂಬ ಅರ್ಚಕನನ್ನು ಐಎಸ್ ಉಗ್ರರು ಶನಿವಾರ ಹತ್ಯೆಗೈದಿದ್ದರು. ರಾಯ್ ಜತೆಗಿದ್ದ ಇಬ್ಬರು ಸಹಾಯಕರಿಗೆ ಗುಂಡೇಟು ತಗಲಿದೆ. ಮೊಟಾರ್ ಬೈಕಿನಲ್ಲಿ ಬಂದ ಮೂವರು ಆಗಂತುಕರು ಈ ದಾಳಿ ನಡೆಸಿದ್ದಾರೆ.
ದೇವಾಲಯಕ್ಕೆ ಕಲ್ಲು ಬಿಸಾಡಿದ ಸದ್ದು ಕೇಳಿ ಹೊರಗೆ ಬಂದು ನೋಡಿದ ಅರ್ಚಕನನ್ನು ದಾಳಿಕೋರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ನಂತರ ಕೈಬಾಂಬ್ ಎಸೆದು ಉಗ್ರರು ಪರಾರಿಯಾಗಿದ್ದರು.