ಸಿಯೋಲ್: ತನ್ನ ಪ್ರಥಮ ಭೂಗರ್ಭ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಉತ್ತರ ಕೊರಿಯಾ ಯಶಸ್ವಿಯಾಗಿ ಪೂರೈಸಿದ್ದು, ತನ್ನ ಪರಮಾಣು ಅಭಿವೃದ್ಧಿಯಲ್ಲಿ ಮುಂದೆ ಗುರುತರವಾದ ಹೆಜ್ಜೆಯನ್ನು ಇಟ್ಟಿದೆ.
ಉತ್ತರ ಕೊರಿಯಾದ ರಿಪಬ್ಲಿಕನ್ ಸರ್ಕಾರ ತನ್ನ ಮೊದಲ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಇಂದು(ಜನವರಿ 6) ಬೆಳಗ್ಗೆ 10 ಗಂಟೆಗೆ ಯಶಸ್ವಿಯಾಗಿ ಪೂರೈಸಿದೆ. ಇದು ಆ ಪಕ್ಷದ ಕಾರ್ಯತಂತ್ರದ ದೃಢ ನಿರ್ಧಾರವನ್ನು ಸೂಚಿಸುತ್ತದೆ ಎಂದು ಸರ್ಕಾರದ ಚಾನೆಲ್ ನ ಸುದ್ದಿ ವಾಚಕರು ಘೋಷಿಸಿದ್ದಾರೆ.
ಹೈಡ್ರೋಜನ್ ಬಾಂಬ್ ನ ಯಶಸ್ವಿ ಉಡಾವಣೆಯಿಂದಾಗಿ ನಾವು ಅಭಿವೃದ್ಧಿ ಹೊಂದಿದ ಪರಮಾಣು ದೇಶದ ಗುಂಪಿಗೆ ಸೇರಿದ್ದೇವೆ ಎಂದು ಸುದ್ದಿ ವಾಚಕರು ಘೋಷಿಸಿದ್ದು, ಪರೀಕ್ಷೆಯು ಒಂದು ಕಿರಿದಾದ ಸಾಧನವಾಗಿದೆ ಎಂದರು.
ಈ ಪರಮಾಣು ಪರೀಕ್ಷೆಯನ್ನು ಖುದ್ದಾಗಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ -ಉನ್ ಅವರು ಆದೇಶಿಸಿದ್ದು, ಅವರ ಹುಟ್ಟುಹಬ್ಬಕ್ಕೆ ಕೇವಲ ಇನ್ನು ಎರಡು ದಿನ ಬಾಕಿ ಇರುವಾಗ ಘೋಷಣೆಯಾಗಿದೆ.
ಇಂದಿನ ಪರಮಾಣು ಪರೀಕ್ಷೆಯು ಸಂಪೂರ್ಣವಾಗಿ ನಮ್ಮ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲವನ್ನು ಅವಲಂಬಿಸಿದ್ದು, ವೈಜ್ಞಾನಿಖವಾಗಿ ಹೆಚ್ಚು ನಿಖರವಾಗಿದೆ ಎಂದು ಸುದ್ದಿ ವಾಚಕರು ಹೇಳಿದ್ದಾರೆ.ಉತ್ತರ ಕೊರಿಯಾದ ಈ ಪರಮಾಣು ಬಾಂಬ್ ಪರೀಕ್ಷೆಗೆ ನೆರೆ ಹೊರೆಯ ದೇಶಗಳು ಕಟುವಾಗಿ ಟೀಕಿಸಿದ್ದು, ತುರ್ತು ಸಭೆಯನ್ನು ಕರೆದಿವೆ.