ಟೆಹ್ರಾನ್: ಇರಾನ್ ಹಾಗೂ ಸೌದಿ ಅರೇಬಿಯಾ ನಡುವಿನ ಕಾಳಗ ದಿನೇ ದಿನೆ ಗಂಭೀರ ಸ್ವರೂಪ ತಳೆಯುತ್ತಿದೆ. ಸೌದಿ ಅರೇಬಿಯಾವು ಯೆಮೆನ್ ರಾಜಧಾನಿ ಸನಾ ಮೇಲೆ ಉದ್ದೇಶಪೂರ್ವಕವಾಗಿ ವಾಯು ದಾಳಿ ನಡೆಸುತ್ತಿದ್ದು, ಇದರಿಂದಾಗಿ ತನ್ನ ರಾಯಭಾರ ಕಚೇರಿಗೆ ಹಾನಿಯಾಗಿದೆಯಲ್ಲದೆ, ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಪಿಸಿದೆ.
ಆರಂಭದಲ್ಲಿ, ಬೇಕಂತಲೇ ರಾಯಭಾರ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿದರೆ, ನಂತರ ತನ್ನ ಹೇಳಿಕೆಯನ್ನು ಬದಲಿಸಿದ್ದು, ಕ್ಷಿಪಣಿಗಳು ರಾಯಭಾರ ಕಚೇರಿಯ ಆವರಣಕ್ಕೆ ಬಂದು ಬಿದ್ದಿವೆ ಎಂದಿದೆ. ಜತೆಗೆ, ಸನಾ ನಿವಾಸಿಗಳು ಕೂಡ ರಾಯಭಾರ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಸೌದಿಯ ಕೃತ್ಯವು ರಾಜ ತಾಂತ್ರಿಕ ಕಚೇರಿಗಳನ್ನು ರಕ್ಷಿಸುವ ಎಲ್ಲ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿದಂತೆ ಎಂದು ಇರಾನ್‍ನ ವಿದೇಶಾಂಗ ಸಚಿವಾಲಯದ ವಕ್ತಾರ ಹುಸೈನ್ ಜಬೇರ್ ಅನ್ಸಾರಿ ಹೇಳಿದ್ದಾರೆ. ಒಟ್ಟಿನಲ್ಲಿ, ಶಿಯಾ ಧರ್ಮಗುರು ನಿಮ್ರಾರನ್ನು ಸೌದಿ ಗಲ್ಲು ಶಿಕ್ಷೆಗೆ ಒಳಪಡಿಸಿದ ಬಳಿಕ ಎರಡೂ ದೇಶಗಳ ನಡುವಿನ ಕಾದಾಟ ತೀವ್ರವಾಗಿದೆ.