ಕ್ವೆಟ್ಟಾ: ಪಾಕಿಸ್ತಾನದಲ್ಲಿ ಉಗ್ರರು ಮತ್ತೆ ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ಪಾಕಿಸ್ತಾನದ ಕ್ವೆಟ್ಟಾ ಪೊಲೀಯೋ ಕೇಂದ್ರದ ಹೊರಗೆ ನಡೆದ ಆತ್ಮಾಹುತಿ ಬಾಂಬ್ ದಾಳಿ ವೇಳೆ 15 ನಾಗರಿಕರು ಮೃತಪಟ್ಟಿದ್ದಾರೆ. ಇನ್ನು 20 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಲೋಚಿಸ್ತಾನ ರಾಜಧಾನಿ ಕ್ವೆಟ್ಟಾದಲ್ಲಿ 3ನೇ ದಿನದ ಪೊಲೀಯೋ ನಿರ್ಮೂಲನೆ ಲಸಿಕಾ ಕಾರ್ಯಕ್ರಮಕ್ಕಾಗಿ ಸಜ್ಜಾಗಿದ್ದ ಹಲವು ಅಧಿಕಾರಗಳು ಪೊಲಿಯೋ ಕೇಂದ್ರದ ಹೊರಗೆ ನಿಂತು ಚರ್ಚಿಸುತ್ತಿದ್ದರು.
12 ಪೊಲೀಸರು, ಒಬ್ಬ ಪ್ಯಾರಾಮಿಲಿಟರಿ ಯೋಧ ಸೇರಿ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸರಾಗಿದ್ದಾರೆ.
ಸಂಡೇಮ್ಯಾನ್ ಆಸ್ಪತ್ರೆಗೆ 15 ಶವಗಳನ್ನು ರವಾನಿಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಲೋಚಿಸ್ತಾನದ ಗೃಹ ಸಚಿವ ಸರ್ಫರಾಜ್ ಬುಗ್ತಿ ನಾವು ಯುದ್ಧ ವಲಯದಲ್ಲಿದ್ದು, ಸ್ಫೋಟದ ಬಗ್ಗೆ ಈಗಲೇ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.