ಕೌಲಾಲಂಪುರ: ಯಾವುದೇ ಕಾರಣಕ್ಕೂ ನಾವು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಲೆಬಾಗುವುದಿಲ್ಲ ಮತ್ತು ಮಲೇಷ್ಯಾದಲ್ಲಿ ಖಲೀಫಾ ಕಾನೂನು ತಂದೇ ತೀರುತ್ತೇವೆ ಎಂದು ಇಸಿಸ್ ಉಗ್ರಗಾಮಿ ಸಂಘಟನೆ ಮಲೇಷ್ಯಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಹಿಂದೆ ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 9 ಮಂದಿ ನಾಗರಿಕರು ಬಲಿಯಾಗಿದ್ದರು. ಇತ್ತೀಚೆಗಷ್ಟೇ ಮಲೇಷ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಬಂಧಿಸಿದ್ದರು. ಈ ಹಿನ್ನಲೆಯಲ್ಲಿ ಹೊಸದೊಂದು ವಿಡಿಯೋ ಬಿಡುಗಡೆ ಮಾಡಿರುವ ಇಸಿಸ್ ಉಗ್ರಗಾಮಿ ಸಂಘಟನೆ, ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗುವ ಕುರಿತು ಎಚ್ಚರಿಕೆ ನೀಡಿದೆ.
"ನೀವು ನಮ್ಮಲ್ಲಿ ಕೆಲವರನ್ನು ಬಂಧಿಸಬಹುದು. ಆದರೆ ನಾವು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿ ಮಾಡುಕೊಳ್ಳುತ್ತೇವೆ. ನೀವೇನಾದರೂ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟರೆ ನಮ್ಮ ಗುರಿಯತ್ತ ನಾವು ಮುನ್ನುಗ್ಗುತ್ತೇವೆ. ವಿಶ್ವಾದ್ಯಂತ ಖಲಿಫ್ಹಾ ಕಾನೂನು ಜಾರಿಗೊಳಿಸುತ್ತೇವೆ. ನಾವು ಕೇವಲ ಅಲ್ಲಾಹುವಿನ ಹಿಂಬಾಲಕರಾಗಿದ್ದು, ಯಾವುದೇ ಕಾರಣಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ.
ಮಕೇ ಭಾಷೆಯಲ್ಲಿ ಈ ವಿಡಿಯೋ ಇದ್ದು, ಇಸಿಸ್ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಈ ವಿಡಿಯೋವನ್ನು ಹರಿಬಿಟ್ಟಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.