ನ್ಯೂಯಾರ್ಕ್: ಸೆಲ್ಫ್ ಡ್ರೈವಿಂಗ್ ಮೋಡ್ ಗೆ ವಿಶ್ವದ ಮೊದಲ ಬಲಿಯಾಗಿದ್ದು, ಕಾರನ್ನು ಆಟೋ ಪೈಲಟ್ ಮೋಡ್ ಗೆ ಹಾಕಿದ್ದ ಕಾರು ಫ್ಲೋರಿಡಾದಲ್ಲಿ ಭೀಕರ ಅಫಘಾತಕ್ಕೀಡಾಗಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೂಲಗಳ ಪ್ರಕಾರ ಮೃತ ವ್ಯಕ್ತಿಯನ್ನು ಫ್ಲೋರಿಡಾದ ಟೆಸ್ಲಾ ಸಂಸ್ಥೆಯ ಕಾರು ಚಾಲಕ ಒಹಿಯೋದ ನಿವಾಸಿ 40 ವರ್ಷದ ಜೋಶುವಾ ಬ್ರೌನ್ ಎಂದು ಗುರುತಿಸಲಾಗಿದ್ದು, ಪ್ಲೋರಿಡಾದಲ್ಲಿ ಅಟೋ ಪೈಲಟ್ ಮೋಡ್‌ನಲ್ಲಿ ಚಲಿಸುತ್ತಿದ್ದ ಟೆಸ್ಲಾ ಕಾರು ಬ್ರೌನ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಚಾಲಕ ಬ್ರೌನ್ ಕಾರನ್ನು ಆಟೋ ಪೈಲಟ್ ಮೋಡ್ ಗೆ ಹಾಕಿದ್ದ ವೇಳೆ ಕಾರಿನ ಸೆನ್ಸಾರ್ ವ್ಯವಸ್ಥೆ ಸ್ಥಗಿತಗೊಂಡಿದ್ದು ಕಾರು ಎದುರುಗಡೆ ಬರುತ್ತಿದ್ದ ಟ್ರಾಕ್ಟರ್ ಟ್ರೇಲರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಬ್ರೌನ್ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಚಾಲಕ ಬ್ರೌನ್ ನನ್ನು ರಕ್ಷಿಸಲು ಮುಂದಾಗಿದ್ದಾರೆಯಾದರೂ, ಅಷ್ಟರಲ್ಲಾಗಲೇ ಚಾಲಕ ಬ್ರೌನ್ ಸಾವನ್ನಪ್ಪಿದ್ದ. ಪ್ರಸ್ತುತ ಪೊಲೀಸರು ಟೆಸ್ಲಾ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪ ನಿರಾಕರಿಸಿದ ಟೆಸ್ಲಾ
ಇನ್ನು ಆಪಘಾತಕ್ಕೆ ತನ್ನ ಸಂಸ್ಥೆಯ ಕಾರು ಕಾರಣವಲ್ಲ ಎಂದು ಟೆಸ್ಲಾ ಸಂಸ್ಥೆ ಜಾರಿಕೊಳ್ಳುವ ಪ್ರಯತ್ನ ಮಾಡಿದೆ. ಟೆಸ್ಲಾ ಸಂಸ್ಥೆ ನಿರ್ಮಿಸಿದ್ದ ಕಾರಿನ ಆಟೋ ಪೈಲಟ್ ಮೋಡ್ ಕಾರ್ಯ ಸ್ಥಗಿತಗೊಳಿಸಿದ್ದರಿಂದಲೇ ಕಾರು ಅಪಘಾತವಾಗಿದೆ ಎಂದು ತಜ್ಞರು ಹೇಳಿದ್ದರೂ, ಟೆಸ್ಲಾ ಸಂಸ್ಥೆ ಇದನ್ನು ಒಪ್ಪಲು ಸಿದ್ಧವಿಲ್ಲ. ಬದಲಿಗೆ ಚಾಲಕನದ್ದೇ ತಪ್ಪು ಎಂದು ವಾದಿಸಿದೆ. ಕಾರು ಅಟೋ ಪೈಲಟ್ ಮೋಡ್‌ನಲ್ಲಿದ್ದರೂ ಸ್ಟೇರಿಂಗ್ ಮೇಲೆ ಕೈಯಿರಿಸಿರುವಂತೆ ಚಾಲಕನಿಗೆ ಅಲರ್ಟ್ ನೀಡುತ್ತಿರುತ್ತದೆ. ಆದರೆ ಚಾಲಕ ಮಾಡಿದ ತಪ್ಪಿನಿಂದಾಗಿ ಅಪಘಾತ ಸಂಭವಿಸಿದೆ. ಹೀಗಾಗಿ ಇದು ಸಂಸ್ಥೆಯ ತಪ್ಪಲ್ಲ ಎಂದು ಟೆಸ್ಲಾ ವಾದಿಸಿದೆ.
ಒಟ್ಟಾರೆ ಕಾರಿನ ಅತ್ಯಾಧುನಿಕ ತಂತ್ರಜ್ಞಾನದ ಮೇಲೆ ನಂಬಿಕೆ ಇಟ್ಟ ಚಾಲಕನ ಪ್ರಾಣ ಪಕ್ಷಿ ಹಾರಿಹೋಗಿದೆ.