ಇರಾಕ್ ನ ಬಾಗ್ದಾದ್ ನಲ್ಲಿ ಬಾಂಬ್ ಸ್ಫೋಟಗೊಂಡ ನಂತರದ ದೃಶ್ಯ
ಬಾಗ್ದಾದ್: ಶನಿವಾರ ಮಧ್ಯರಾತ್ರಿ ಬಾಗ್ದಾದ್ ನ ಎರಡು ನಗರ ಪ್ರದೇಶಗಳಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಕನಿಷ್ಟ 82 ಮಂದಿ ಸಾವನ್ನಪ್ಪಿದ್ದು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಂಜಾನ್ ಹಬ್ಬದ ಆಚರಣೆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವ ಸಡಗರದಲ್ಲಿ ಜನರಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟಕಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಕರ್ರದ ಎಂಬ ಪ್ರದೇಶದಲ್ಲಿ ಸ್ಫೋಟಗೊಂಡಿತು. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಸುನ್ನಿ ಗುಂಪನ್ನು ಬೆಂಬಲಿಸುತ್ತಿರುವವರು ಆನ್ ಲೈನ್ ನಲ್ಲಿ ಹೇಳಿಕೆಯನ್ನು ಪಸರಿಸಿದ್ದಾರೆ. ಆತ್ಮಹತ್ಯಾ ದಾಳಿಯಿಂದ ಸ್ಫೋಟ ಸಂಭವಿಸಿದೆ.
ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಈ ವಾರ ಮುಗಿಯುತ್ತಿದ್ದು, ಈ ಸಂದರ್ಭದಲ್ಲಿ ದಿನವಿಡೀ ಉಪವಾಸ ಕುಳಿತು ರಾತ್ರಿ ವೇಳೆ ಆಹಾರ ಸೇವಿಸುತ್ತಾರೆ. ಕಳೆದ ಮಧ್ಯರಾತ್ರಿ ಇರಾಕಿಗಳು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕರ್ರದಾ ಪ್ರದೇಶದ ಮುಖ್ಯ ರಸ್ತೆಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಗೊತ್ತಾಗಿದೆ. ಘಟನೆಯಲ್ಲಿ ಕನಿಷ್ಠ 4 ಕಟ್ಟಡಗಳು ಕೂಡ ಹಾನಿಗೀಡಾಗಿವೆ.
ಇನ್ನೊಂದೆಡೆ ಬಾಗ್ದಾದ್ ದ ಉತ್ತರ ಭಾಗದಲ್ಲಿ ಶಿಯಾತ್ ಜಿಲ್ಲೆಯ ಅಲ್-ಶಾಬ್ ಮಾರುಕಟ್ಟೆಯಲ್ಲಿ ಮಧ್ಯರಾತ್ರಿ ರಸ್ತೆ ಬದಿಯಲ್ಲಿಟ್ಟಿದ್ದ ಸ್ಫೋಟಕವೊಂದು ಸ್ಫೋಟಗೊಂಡು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics